ಕಲಾವಿದರ ಕಲ್ಯಾಣ ಮಂಡಳಿಗೆ ನಿಯಮಗಳ ರಚನೆ | Grant in aid for cine activists

Vidhanasoudha
Published on

ಬೆಂಗಳೂರು: ಸಿನಿಮಾ, ಸಾಂಸ್ಕೃತಿಕ ಕ್ಷೇತ್ರದ ಕಲಾವಿದರ ಬಹು ನಿರೀಕ್ಷಿತ ಕಲ್ಯಾಣ ಮಂಡಳಿ ಸ್ಥಾಪನೆ ದಿನಗಳು ಸನಿಹವಾಗಿದ್ದು, ಕಲಾವಿದರ ಮಕ್ಕಳಿಗೆ ಶಿಕ್ಷಣ ಖಾತರಿ ನೀಡಲು ರಾಜ್ಯ ಸಕಾರ ಬಯಸಿದೆ.

‘ಕರ್ನಾಟಕ ಸಿನಿಮಾ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಕಾಯ್ದೆ, 2024 (ಕರ್ನಾಟಕ ಕಾಯ್ದೆ 2024ರ 46)’ರಡಿ ಕರಡು ನಿಯಮಾವಳಿಗಳನ್ನು ಸಿದ್ಧಪಡಿಸಿ ಪ್ರಕಟಿಸಲಾಗಿದೆ.

ಈ ನಿಯಮಾವಳಿಗಳು ಸೆ.24ರಂದು ಪ್ರಕಟವಾದ ದಿನದಿಂದ ಆಕ್ಷೇಪಣೆ ಅಥವಾ ಸಲಹೆಗಳನ್ನು ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ. ಸೂಕ್ತವೆನಿಸಿದ ಆಕ್ಷೇಪಣೆ, ಸಲಹೆಗಳನ್ನು ಪರಿಗಣಿಸಿ ನಿಯಮಾವಳಿಗಳನ್ನು ಅಂತಿಮಗೊಳಿಸಲಿದೆ.

ಸಿನಿಮಾ ಮತ್ತು ಸಾಂಸ್ಕೃತಿಕ ಕಲಾವಿದರ ನೋಂದಣಿ ಪ್ರಾಧಿಕಾರ ನೇಮಕ, ಕಲ್ಯಾಣ ಮಂಡಳಿ ಸ್ಥಾಪನೆ, ಅಪಘಾತ ಪರಿಹಾರ ಸೇರಿ ಹಲವು ಚಟುವಟಿಕೆಗಳನ್ನು ನಿಯಮಗಳಲ್ಲಿ ಪ್ರಸ್ತಾಪ ಮಾಡಲಾಗಿದೆ.

ಮಂಡಳಿಗೆ ಸೆಸ್ ಸಂಗ್ರಹ

ಕಲಾವಿದರ ಕಲ್ಯಾಣ ಮಂಡಳಿಗೆ ಅಗತ್ಯವಿರುವ ಆರ್ಥಿಕ ಸಂಪನ್ಮೂಲವನ್ನು ವಿವಿಧ ಸೆಸ್‌ಗಳ ಮೂಲಕ ಸಂಗ್ರಹಿಸಲು ಉದ್ದೇಶಿಸಲಾಗಿದೆ.

ಮಲ್ಟಿಪ್ಲೆಕ್ಸ್ ಸೇರಿ ಚಿತ್ರಮಂದಿರಗಳ ಟಿಕೆಟ್, ರಾಜ್ಯದಲ್ಲಿ ಕಾರ್ಯಾಚರಿಸುವ ಟಿವಿ ಮನೋರಂಜನಾ ವಾಹಿನಿಗಳ ಮೇಲೆ ತಲಾ ಶೇಕಡ ಎರಡರಷ್ಟು ಸೆಸ್ ವಿಧಿಸಲಾಗುತ್ತದೆ. ಸೆಸ್ ಸಂಗ್ರಹ, ಮಂಡಳಿಗೆ ಸಂದಾಯ ಮಾಡುವುದು ಸರ್ಕಾರದ ಹೊಣೆಯಾಗಿದೆ.

ಇವೆರಡೂ ಸೆಸ್ ಮೂಲಗಳನ್ನು ಹೊರತುಪಡಿಸಿ ಮಂಡಳಿಗೆ ಸರ್ಕಾರದಿಂದಲೂ ಸಹಾಯಧನ ನೀಡಬೇಕು ಎಂಬ ಅಂಶವೂ ನಿಯಮಾವಳಿಗಳಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net