ಕೆರೆಗಳ ನಿರ್ವಹಣೆ ಖಾಸಗಿಯವರಿಗೆ ವಹಿಸಲು ನೀತಿ ರಚನೆ : ಹೈಕೋರ್ಟ್‌ಗೆ ಸರ್ಕಾರ ಮಾಹಿತಿ

highcourt
Published on

ಬೆಂಗಳೂರು: ನಗರದ ಬಿಬಿಎಂಪಿ ವ್ಯಾಪ್ತಿಯ 205 ಕೆರೆಗಳ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸುವ ಸಂಬಂಧ ನೀತಿ ರೂಪಿಸಲಾಗಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ನಗರದಲ್ಲಿ ಒತ್ತುವರಿಯಾಗಿರುವ ರಾಜಕಾಲುವೆ ಕೆರೆ ಜಾಗಗಳ ಒತ್ತುವರಿ ತೆರವುಗೊಳಿಸಲು ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಿಟಿಜಲ್ ಆ್ಯಕ್ಷನ್ ಗ್ರೂಪ್ ಹಾಗೂ ಇತರರು ಸಲ್ಲಿಸಲಾಗಿರುವ ಅರ್ಜಿಯನ್ನು ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಸರ್ಕಾರದ ಪರ ಹಾಜರಾದ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಬಿಬಿಎಂಪಿ ವ್ಯಾಪ್ತಿಯಲ್ಲಿ 205 ಕೆರೆಗಳಿವೆ. ಅವುಗಳ ನಿರ್ವಹಣೆಗೆ ಪಾಲಿಕೆಗೆ ವಾರ್ಷಿಕ ಅಂದಾಜು 30 ಕೋಟಿ ರೂ. ಬೇಕು. ಇಷ್ಟೊಂದು ದೊಡ್ಡ ಮೊತ್ತ ಪ್ರತಿ ವರ್ಷ ಹೊಂದಿಸುವುದು ಪಾಲಿಕೆಗೆ ಕಷ್ಟ ಸಾಧ್ಯ. ಆದ್ದರಿಂದ ಕೆರೆಗಳ ನಿರ್ವಹಣೆಯನ್ನು ಖಾಸಗಿಯವರಿಗೆ ಅಂದರೆ, ಸ್ಥಳೀಯ ನಿವಾಸಿಗಳ ಸಂಘಗಳು, ಸಹಕಾರ ಸಂಘಗಳು, ಎನ್.ಜಿ.ಓ, ಕಾರ್ಪೋರೆಟ್ ಕಂಪೆನಿಗಳಿಗೆ ವಹಿಸುವ ಸಂಬಂಧ ನೀತಿ ರೂಪಿಸಲಾಗಿದೆ.

ಕೆರೆಗಳ ಮಾಲಿಕತ್ವ, ಮೇಲ್ವಿಚಾರಣೆ ಸರ್ಕಾರ ಮತ್ತು ಪಾಲಿಕೆಯದ್ದೆ ಆಗಿರಲಿದೆ. ಯಾವುದೇ ಕಾರಣಕ್ಕೂ ಮಾಲೀಕತ್ವವನ್ನು ಖಾಸಗಿಯವರಿಗೆ ಬಿಟ್ಟು ಕೊಡಲಾಗುವುದಿಲ್ಲ. ಅವರು ಕೆರೆ ನಿರ್ವಹಣೆ ಮತ್ತು ಅಭಿವದ್ಧಿಗೆ ಹಣ ಖರ್ಚು ಮಾಡಬೇಕು ಅಷ್ಟೇ. ಈ ವಿಚಾರವಾಗಿ ಆಸಕ್ತರ ಅಭಿಪ್ರಾಯ ಆಹ್ವಾನಿಸಲಾಗುವುದು, ನಮ್ಮ ಷರತ್ತುಗಳನ್ನು ಒಪ್ಪಿಕೊಂಡವರಿಗೆ ನಿರ್ವಹಣೆಗೆ ಜವಾಬ್ದಾರಿ ನೀಡಲಾಗುತ್ತದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರಾದ ಜಯನಾ ಕೊಠಾರಿ ಹಾಗೂ ಜಿ.ಆರ್. ಮೋಹನ್, ಸ್ಥಳೀಯ ನಿವಾಸಿಗಳ ಸಂಘಗಳು, ಕೆರೆಯ ಅಕ್ಕಪಕ್ಕದ ನಿವಾಸಿಗಳಿಗೆ ಕರೆಗಳ ನಿರ್ವಹಣೆ ನೀಡುವುದಕ್ಕೆ ನಮ್ಮ ಅಕ್ಷೇಪವಿಲ್ಲ. ಆದರೆ, ಕಾರ್ಪೋರೇಟ್ ಕಂಪನಿಗಳ ವಿಚಾರದಲ್ಲಿ ನಮಗೆ ಕೆಲವು ಸಂದೇಹವಿದೆ. ಅಂತಿಮವಾಗಿ ನಗರದ ಕೆರೆಗಳು ಉಳಿಯಬೇಕು ಎಂಬ ಉದ್ದೇಶ ನಮ್ಮದಾಗಿದೆ ಎಂದರು.

ಅದಕ್ಕೆ ಅಡ್ವೋಕೇಟ್ ಜನರಲ್ ಉತ್ತರಿಸಿ ಸರ್ಕಾರದ ಉದ್ದೇಶವೂ ಕೆರೆಗಳು ಉಳಿಯಬೇಕು, ಅವುಗಳ ನಿರ್ವಹಣೆಗೆ ಉತ್ತಮ ರೀತಿಯಲ್ಲಿ ಆಗಬೇಕು ಎಂದಿದೆ. ಕಾರ್ಪೋರೇಟ್ ಕಂಪೆನಿಗಳ ನೆರವು ನಮಗೆ ಬೇಕು ಏಕೆಂದರೆ ಕೆರೆಗಳ ನಿರ್ವಹಣೆಗೆ ನಮಗೆ ಹಣ ಬೇಕು. ಆದರೆ, ಅರ್ಜಿದಾರರು ಯಾವುದೇ ಅನುಮಾನಗಳನ್ನು ಇಟ್ಟುಕೊಳ್ಳಬಾರದು. ಎಲ್ಲವನ್ನೂ ನೀತಿಯಲ್ಲಿ ವಿವರಿಸಲಾಗಿದೆ. ಜತೆಗೆ ಅರ್ಜಿದಾರರ ಬಳಿ ಸಲಹೆಗಳಿದ್ದರೆ ಅವುಗಳನ್ನು ಸ್ವೀಕರಿಸಿ ನಿಯಮಾನುಸಾರು ಅಳವಡಿಸಿಕೊಳ್ಳಲು ಸರ್ಕಾರ ಒಮ್ಮತ ಹೊಂದಿದೆ ಎಂದು ಭರವಸೆ ನೀಡಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಸರ್ಕಾರದ ನೀತಿಗೆ ಪೂರಕವಾಗಿ ಸಲಹೆಗಳಿದ್ದರೆ ಅರ್ಜಿದಾರರು ಸರ್ಕಾರ ಮತ್ತು ಪಾಲಿಕೆಗೆ ಸಲ್ಲಿಸಬಹುದು ಎಂದು ಹೇಳಿ ವಿಚಾರಣೆಯನ್ನು ಜುಲೈ 31ಕ್ಕೆ ಮುಂದೂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net