

KTR: ಬಿಆರ್ಎಸ್ ಪಕ್ಷ ಅಧಿಕಾರದಲ್ಲಿದ್ದಾಗ ಹೈದರಾಬಾದ್ನಲ್ಲಿ ಆಯೋಜಿಸಿದ್ದ ಫಾರ್ಮುಲಾ-ಇ ರೇಸ್‌ನಲ್ಲಿ ಹಗರಣ ನಡೆದಿದ್ದು, ಎ1 ಆಗಿ ಬಿಆರ್ಎಸ್ ಕಾರ್ಯಾದ್ಯಕ್ಷ ಕೆಟಿಆರ್ ಹೆಸರು ಕೇಳಿ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬಿಆರ್ಎಸ್ ಕಾರ್ಯಾಧ್ಯಕ್ಷ ಕೆಟಿಆರ್, ಇದೊಂದು ಬೋಗಸ್ ಕೇಸ್, ಸುಳ್ಳು ಪತ್ತೆ ಪರೀಕ್ಷೆಗೂ ಸಿದ್ದ ಎಂದು ತೆಲಂಗಾಣ ಕಾಂಗ್ರೆಸ್ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಈ ಕುರಿತು ಬುಧವಾರ(ಸೆ.10) ಹೈದರಬಾದ್ನಲ್ಲಿ ಮಾತನಾಡಿರುವ ಅವರು, ಹೈದರಾಬಾದ್‌ಗೆ ಫಾರ್ಮುಲಾ-ಇ ರೇಸ್ ತರಲು ತಾವು ಶ್ರಮಿಸಿದ್ದೇನೆ. ಸರ್ಕಾರದಿಂದ 46 ಕೋಟಿ ರೂ. ಹಣವನ್ನು ಬಿಡುಗಡೆಗೆ ನಿರ್ದೇಶನ ನೀಡಿದ್ದೇನೆ. ಆದರೆ ಆ ಹಣ ನೇರವಾಗಿ ಗೊತ್ತುಪಡಿಸಿದ ಖಾತೆಗೆ ಹೋಗಿದೆ ಎಂದು ಸ್ಪಷ್ಟಪಡಿಸಿದರು.
ಒಂದು ರೂಪಾಯಿಯೂ ದುರುಪಯೋಗವಾಗಿಲ್ಲ. ಪ್ರತಿಯೊಂದು ರೂಪಾಯಿಗೂ ಲೆಕ್ಕ ಹಾಕಲಾಗಿದೆ. ಹಾಗಾದರೆ ಭ್ರಷ್ಟಾಚಾರ ಎಲ್ಲಿದೆ?, ಎಸಿಬಿ ಆರೋಪಪಟ್ಟಿ ಸಲ್ಲಿಸಿದರೂ ಅದು ಕಾನೂನು ಪರಿಶೀಲನೆಗೆ ನಿಲ್ಲುವುದಿಲ್ಲ. ಸರ್ಕಾರವು ನಿಜವಾದ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯುತ್ತಿದೆ. ಬಿಆರ್‌ಎಸ್‌ಗೆ ಯಾವುದೇ ಬೆದರಿಕೆ ಇಲ್ಲ. ಜನರ ಸಮಸ್ಯೆಗಳ ಕುರಿತು ಸರ್ಕಾರವನ್ನು ಪ್ರಶ್ನಿಸುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.
ಇದೇ ವೇಳೆ ಸಿಎಂ ರೇವಂತ್ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ ಕೆಟಿಆರ್, ತಮ್ಮೊಂದಿಗೆ ಸೇರಿ ಸುಳ್ಳು ಪತ್ತೆ ಪರೀಕ್ಷೆ ಎದುರಿಸುವಂತೆ ಸವಾಲು ಹಾಕಿದರು. ಯಾರು ಸತ್ಯ ಹೇಳುತ್ತಿದ್ದಾರೆಂದು ಜನರು ನಿರ್ಧರಿಸಲಿ. ಕ್ಯಾಮೆರಾದಲ್ಲಿ ರೇವಂತ್ ₹50 ಲಕ್ಷ ಬಂಡಲ್‌ಗಳೊಂದಿಗೆ ಸಿಕ್ಕಿಬಿದ್ದಿದ್ದ ನೋಟಿಗೆ ಮತ ಹಗರಣವನ್ನು ಜನರು ಮರೆತಿಲ್ಲ ಎಂದು ಕಿಡಿಕಾರಿದರು.
ಏತನ್ಮಧ್ಯೆ, ಮಾಜಿ ಸಚಿವ ಕೆಟಿಆರ್ ಆರೋಪಿಯಾಗಿರುವ ಫಾರ್ಮುಲಾ-ಇ ಕಾರು ರೇಸ್‌ನಲ್ಲಿ ಎಸಿಬಿ ಅಧಿಕಾರಿಗಳು ಕ್ವಿಡ್ ಪ್ರೊ ಕ್ವೋವನ್ನು ಗುರುತಿಸಿದ್ದಾರೆ ಎಂದು ವರದಿಯಾಗಿದೆ. ಕೆಸಿಆರ್ ಸರ್ಕಾರದ ಅವಧಿಯಲ್ಲಿ, ಫಾರ್ಮುಲಾ-ಇ ಕಾರು ರೇಸ್‌ನಲ್ಲಿ ಪಾಲುದಾರರಾಗಿದ್ದ ಕಂಪನಿಗಳಿಗೆ ಎಚ್‌ಎಂಡಿಎ ಖಾತೆಯಿಂದ 45 ಕೋಟಿ ರೂ. ಮೌಲ್ಯದ ಹಣವನ್ನು ವರ್ಗಾಯಿಸಲಾಗಿದೆ. ಆ ಕಂಪನಿಗಳಿಂದ ಚುನಾವಣಾ ಬಾಂಡ್‌ಗಳ ರೂಪದಲ್ಲಿ ಬಿಆರ್‌ಎಸ್‌ಗೆ 44 ಕೋಟಿ ರೂ. ಹಣ ಹಿಂತಿರುಗಿದೆ ಎಂದು ತನಿಖೆ ನಡೆಸುತ್ತಿರುವ ಎಸಿಬಿ ತೀರ್ಮಾನಕ್ಕೆ ಬಂದಿದೆ. (ಏಜೆನ್ಸೀಸ್)