

ಬೆಂಗಳೂರು: ಶ್ವಾಸಕೋಶ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ ಅವರ ಆರೋಗ್ಯ ಸುಧಾರಿಸಿದ್ದು, ವೈದ್ಯರ ಸಲಹೆಯಂತೆ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿದ್ದಾರೆ ಎಂದು ಶಾಸಕ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಶ್ವಾಸಕೋಶದ ಸೋಂಕು ನಿವಾರಣೆ ಆದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿರುವುದಾಗಿ ಮಣಿಪಾಲ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಭಗವಂತನ ಕೃಪೆ ಮತ್ತು ವೈದ್ಯರ ಪರಿಶ್ರಮದಿಂದ ಎಸ್.ಎಂ.ಕೃಷ್ಣ ಅವರು ಗುಣಮುಖರಾಗಿದ್ದಾರೆ. ಆದರೆ ಎರಡು ವಾರಗಳ ಕಾಲ ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದು, ಯಾವುದೇ ಸಾರ್ವಜನಿಕ ಭೇಟಿ ಮತ್ತು ಕಾರ್ಯಕ್ರಮಗಳಿಗೆ ಪಾಲ್ಗೊಳ್ಳದಂತೆ ವೈದ್ಯರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಹಿತೈಷಿಗಳು, ಅಭಿಮಾನಿಗಳು ಕೆಲವು ದಿನಗಳ ಕಾಲ ಅವರನ್ನು ಭೇಟಿ ಮಾಡದಂತೆ ಕುಟುಂಬ ವರ್ಗದವರಿಗೆ ವೈದ್ಯರು ತಿಳಿಸಿದ್ದಾರೆ.
91 ವರ್ಷ ವಯಸ್ಸಿನ ಎಸ್.ಎಂ.ಕೃಷ್ಣ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದಾರೆ. ಮೊದಲು ಕಾಂಗ್ರೆಸ್ನಲ್ಲಿದ್ದು ಕೇಂದ್ರ ಸಚಿವರು, ಕರ್ನಾಟಕ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ, ನಂತರ ಪಕ್ಷ ತನ್ನನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿ 2017ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಎರಡು ವರ್ಷದ ಹಿಂದೆ ಅವರು ನಾಡಪ್ರಭು ಕೆಂಪೇಗೌಡ ಅವರ ಹೆಸರಿನಲ್ಲಿ ರಾಜ್ಯ ಸರ್ಕಾರ ಸ್ಥಾಪಿಸಿರುವ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ ವರ್ಷ ಎಸ್.ಎಂ. ಕೃಷ್ಣ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತಿ ಪಡೆದಿದ್ದಾರೆ.