

ನವದೆಹಲಿ: ಕಾಂಗ್ರೆಸ್ನ ಮಾಜಿ ಕೇಂದ್ರ ಸಚಿವ ಮತ್ತು ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಅವರು ಇಳಿ ವಯಸ್ಸಿನಲ್ಲಿ ಹಸೆಮಣೆ ಏರಿದ್ದಾರೆ. 60 ವರ್ಷ ವಯಸ್ಸಿನ ಅವರು ತಮ್ಮ ಸ್ನೇಹಿತೆ ರವೀನ್ ಖುರಾನಾ ಜತೆ ದಾಂಪತ್ಯ ಜೀವನವನ್ನು ಆರಂಭಿಸಿದ್ದಾರೆ.
ಪಂಚತಾರಾ ಹೋಟೆಲ್ನಲ್ಲಿ ನಡೆದ ಮದುವೆ ಸಂಭ್ರಮದಲ್ಲಿ ಹಲವು ಗಣ್ಯಾತಿಗಣ್ಯರು ಭಾಗವಹಿಸಿದ್ದರು. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕಾಂಗ್ರೆಸ್ನ ಹಿರಿಯ ಮುಖಂಡರಾದ ಅಹ್ಮದ್ ಪಟೇಲ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.
ನೂತನ ಜೀವನವನ್ನು ಆರಂಭಿಸಿರುವ ಮುಕುಲ್ ವಾಸ್ನಿಕ್ ದಂಪತಿಗೆ ಅಶೋಕ್ ಗೆಹ್ಲೋಟ್, ಮಾಜಿ ಕೇಂದ್ರ ಸಚಿವ ಮನೀಶ್ ತಿವಾರಿ ಸೇರಿದಂತೆ ಕಾಂಗ್ರೆಸ್ನ ಅನೇಕ ನಾಯಕರು ಟ್ವಿಟ್ಟರ್ನಲ್ಲಿ ಶುಭಹಾರೈಸಿದ್ದಾರೆ.
ದಲಿತ ರಾಜಕಾರಣಿಯಾಗಿರುವ ಮುಕುಲ್ ವಾಸ್ನಿಕ್ ಮಹಾರಾಷ್ಟ್ರದ ಪ್ರಸಿದ್ಧ ನಾಯಕ ಬಾಲಕೃಷ್ಣ ಅವರ ಮಗ. 2009ರಿಂದ 2012ರವರೆಗೆ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಇವರನ್ನು ಕಾಂಗ್ರೆಸ್ನಿಂದ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಲಾಗುವುದು ಎನ್ನುವ ಸುದ್ದಿಗಳು ಹರಿದಾಡಿತ್ತು. (ಏಜೆನ್ಸೀಸ್)