ಗುಂಡಿನ ದಾಳಿ ಬಳಿಕ ಡೊನಾಲ್ಡ್​ ಟ್ರಂಪ್ ಮೊದಲ​​ ಮಾತು; ಅಮೆರಿಕದ ಮಾಜಿ ಅಧ್ಯಕ್ಷ ಹೇಳಿದ್ದೇನು ಗೊತ್ತಾ?

Untitled-design-33
Published on

ವಾಷಿಂಗ್ಟನ್​ಡಿಸಿ: ಮಿಲ್ವಾಕಿಯಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ಸಮಾವೇಶದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್​​​​ ಟ್ರಂಪ್​​ ತಮ್ಮ ಮೇಲೆ ನಡೆದ ಹತ್ಯೆ ಯತ್ನವನ್ನು ನೆನಪಿಸಿಕೊಂಡಿದ್ದಾರೆ. ಪೆನ್ಸಿಲ್ವೇನಿಯಾದ ರ್ಯಾಲಿಯಲ್ಲಿ ನಡೆದ ಗುಂಡಿನ ದಾಳಿಯ ಬಳಿಕ ಇದು ಅವರ ಮೊದಲ ಸಾರ್ವಜನಿಕ ಭಾಷಣವಾಗಿದೆ.

ಅಧ್ಯಕ್ಷೀಯ ನಾಮನಿರ್ದೇಶನವನ್ನು ಔಪಚಾರಿಕವಾಗಿ ಸ್ವೀಕರಿಸುವ ಭಾಷಣದಲ್ಲಿ ಅವರು, ದಾಳಿ ಬಗ್ಗೆ ಅನೇಕರು ನನ್ನನ್ನು ದಯವಿಟ್ಟು ಏನಾಯಿತು ಎಂದು ನಮಗೆ ತಿಳಿಸಿ ಎಂದು ಕೇಳುತ್ತಿದ್ದಾರೆ. ಅಲ್ಲಿ ಏನಾಯಿತು ಎಂಬುದನ್ನು ನಾನು ನಿಮಗೆ ನಿಖರವಾಗಿ ಹೇಳುತ್ತೇನೆ. ಈಗ ನಾನು ಇಲ್ಲಿ ಇರುತ್ತಿರಲಿಲ್ಲ. ದೇವರು ನನ್ನ ಪರವಾಗಿ ಇದ್ದ ಕಾರಣ ತುಂಬಾ ಸುರಕ್ಷಿತವಾಗಿ ಇದ್ದೇನೆ ಎಂದು ಹೇಳಿದರು.

ದಾಳಿ ನಡೆದ ಸಮಯದಲ್ಲಿ, ದಕ್ಷಿಣ ಗಡಿಯಲ್ಲಿ ವಲಸೆಯ ಕುರಿತು ನನ್ನ ಆಡಳಿತವು ಮಾಡಿದ ಮಹತ್ತರವಾದ ಕೆಲಸದ ಬಗ್ಗೆ ತುಂಬಾ ಹೆಮ್ಮೆಯಿಂದ ಮಾತನಾಡಲು ಪ್ರಾರಂಭಿಸಿದೆ. ನನ್ನ ಹಿಂದೆ ಬಲಕ್ಕೆ ದೊಡ್ಡ ಪರದೆಯಲ್ಲಿ ಗಡಿ ದಾಟುವ ಜನರ ಸಂಖ್ಯೆಯನ್ನು ಪ್ರದರ್ಶಿಸಲಾಗುತಿತ್ತು. ನಾನು ಚಾರ್ಟ್ ಅನ್ನು ನೋಡಲು ನನ್ನ ಬಲಕ್ಕೆ ತಿರುಗಿದೆ. ಒಂದು ಜೋರಾಗಿ ಶಿಳ್ಳೆ ಶಬ್ದ ಕೇಳಿದಂತಾಯಿತು. ನನ್ನ ಬಲ ಕಿವಿಗೆ ಏನೋ ಬಲವಾಗಿ ಬಡಿದಂತಾಯಿತು. ಅದು ಬುಲೆಟ್​​ ಇರಬಹುದು ಎಂದು ನಾನು ನನ್ನಲ್ಲಿಯೇ ಹೇಳಿಕೊಂಡೆ, ಬಳಿಕ ನನ್ನ ಕೈಯಿಂದ ಕಿವಿಯನ್ನು ಮುಟ್ಟಿದಾಗ ನನ್ನ ಕೈ ರಕ್ತದಿಂದ ಮುಚ್ಚಲ್ಪಟ್ಟಿತು ಎಂದು ವಿವರಿಸಿದರು. ನಾನು ಮಾಡಿದ ಅದೃಷ್ಟ ಎನ್ನಿಸುತ್ತದೆ. ಗುಂಡು ಹಾರಿಸಿದ ಕೆಲವೇ ಸೆಕೆಂಡ್​ಗಳ ಮೊದಲು ತಾನು ಮುಂದಕ್ಕೆ ವಾಲಿದಾಗ ಬುಲೆಟ್ ಬಂದು ನನ್ನ ಕಿವಿಗೆ ಬಡಿಯಿತು. ಇಲ್ಲದಿದ್ದರೆ ಹಂತಕ ತನ್ನ ಗುರಿಯನ್ನು ಯಶಸ್ವಿಯಾಗಿ ತಲುಪುತಿದ್ದ. ಅದು ನಡೆದಿದ್ದರೆ ನಾನು ಇಲ್ಲಿ ನಿಮ್ಮೊಂದಿಗೆ ಇರುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ನ್ಯಾಯ ವ್ಯವಸ್ಥೆಯನ್ನು ಆಯುಧಗೊಳಿಸುವುದನ್ನು ನಿಲ್ಲಿಸಿ ಮತ್ತು ರಾಜಕೀಯ ಎದುರಾಳಿಯನ್ನು ಪ್ರಜಾಪ್ರಭುತ್ವದ ಶತ್ರು ಎಂದು ಹೆಸರಿಸುವುದನ್ನು ನಿಲ್ಲಿಸಿ. ಈ ಕಾರ್ಯಾಚರಣೆಯಲ್ಲಿ ಯಾವುದೂ ನನ್ನನ್ನು ತಡೆಯುವುದಿಲ್ಲ. ಏಕೆಂದರೆ ನಮ್ಮ ದೃಷ್ಟಿ ನ್ಯಾಯಯುತವಾಗಿದ್ದು, ನಮ್ಮ ಕಾರಣ ಶುದ್ಧವಾಗಿದೆ ಎಂದು ತಿಳಿಸಿದರು. 1981 ಮಾರ್ಚ್​​ 30ರಂದು ಅಧ್ಯಕ್ಷ ರೊನಾಲ್ಡ್ ರೇಗನ್ ಅವರ ಮೇಲೆ ಗುಂಡು ಹಾರಿಸಿದ ನಂತರ ಅಮೆರಿಕದಲ್ಲಿ ಮಾಜಿ ಅಧ್ಯಕ್ಷ ಅಥವಾ ಅಧ್ಯಕ್ಷೀಯ ಅಭ್ಯರ್ಥಿಯ ಮೇಲೆ ಹತ್ಯೆಯ ಪ್ರಯತ್ನ ಮಾಡಿರುವ ಮೊದಲ ಪ್ರಕರಣ ಇದಾಗಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net