

ನವದೆಹಲಿ: ಎದೆನೋವಿನ ಸಂಬಂಧ ಭಾನುವಾರ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಏಮ್ಸ್) ಚಿಕಿತ್ಸೆ ಪಡೆಯುತ್ತಿದ್ದ ಅವರು ಮಂಗಳವಾರ ಮಧ್ಯಾಹ್ನ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಮರಳಿದರು.
ಹೊಸ ಔಷಧವೊಂದಕ್ಕೆ ಅವರ ದೇಹ ವ್ಯತಿರಿಕ್ತವಾಗಿ ವರ್ತಿಸಿದ್ದರಿಂದ, ಅವರಲ್ಲಿ ಎದೆನೋವು ಹಾಗೂ ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಅವರನ್ನು ಏಮ್ಸ್ಗೆ ದಾಖಲಿಸಲಾಗಿತ್ತು.
ಸೋಮವಾರದ ವೇಳೆಗೆ 87 ವರ್ಷದ ಮಾಜಿ ಪ್ರಧಾನಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಯಿತು. ಆದರೂ ಒಂದು ದಿನ ಅವರನ್ನು ನಿಗಾದಲ್ಲಿ ಇರಿಸಿ, ಮಂಗಳವಾರ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ಏಮ್ಸ್ ವೈದ್ಯರು ತಿಳಿಸಿದ್ದಾರೆ.