ಸಿಬಿಐ ಮಾಜಿ ನಿರ್ದೇಶಕ ಅಶ್ವನಿ ಕುಮಾರ್​​ ಸಾವು; ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

CBI
Published on

ಶಿಮ್ಲಾ:  ಸಿಬಿಐ ಮಾಜಿ ನಿರ್ದೇಶಕ ಅಶ್ವನಿ ಕುಮಾರ್ ಮೃತದೇಹ ಹಿಮಾಚಲ ಪ್ರದೇಶದ ಶಿಮ್ಲಾದ ಅವರ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಶಿಮ್ಲಾ ಎಸ್​ಪಿ ಮೋಹಿತ್​ ಚಾವ್ಲಾ ಮಾಹಿತಿ ನೀಡಿದ್ದಾರೆ. ವೈದ್ಯರು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಯುತ್ತಿದೆ. ಸಂಬಂಧಪಟ್ಟವರ ವಿಚಾರಣೆಯನ್ನೂ ನಡೆಸಲಾಗುತ್ತಿದೆ ಎಂದು ಮೋಹಿತ್ ತಿಳಿಸಿದ್ದಾರೆ.

1973ರ ಬ್ಯಾಚ್​ನ ಐಪಿಎಸ್ ಅಧಿಕಾರಿಯಾಗಿದ್ದ ಅಶ್ವನಿ ಕುಮಾರ್​ 2008ರಿಂದ 2010ರವರೆಗೆ ಸಿಬಿಐ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಇವರ ಅಧಿಕಾರ ಅವಧಿಯಲ್ಲಿ ಹಲವು ಹೈಪ್ರೊಫೈಲ್​ ಪ್ರಕರಣದ ತನಿಖೆಯನ್ನು ನಡೆಸಲಾಗಿತ್ತು.

2014ರಲ್ಲಿ ನಾಗಾಲ್ಯಾಂಡ್​ನ ರಾಜ್ಯಪಾಲರಾಗಿಯೂ ನೇಮಕ ಆಗಿದ್ದರು. ಅದಕ್ಕೂ ಮೊದಲು 2013ರಲ್ಲಿ ಅತ್ಯಂತ ಕಡಿಮೆ ಅವಧಿಗೆ ಮಣಿಪುರ ಗವರ್ನರ್​ ಆಗಿದ್ದರು. 2008ರಲ್ಲಿ ಸಿಬಿಐ ನಿರ್ದೇಶಕರಾಗಿ ನೇಮಕಗೊಳ್ಳುವ ಮೊದಲು 2006ರಿಂದ 2008ರವರೆಗೆ ಹಿಮಾಚಲ ಪ್ರದೇಶದ ಡಿಜಿಪಿ ಆಗಿ ಕರ್ತವ್ಯ ಮಾಡಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net