ಬಿಜೆಪಿಗೆ ರಾಜೀನಾಮೆ ಕೊಟ್ಟ ಯಡಿಯೂರಪ್ಪರ ಆಪ್ತ; ಇವರು ಮಾಜಿ ಶಾಸಕರೂ ಆಗಿದ್ರು

ub banakar
Published on

ಹಿರೇಕೆರೂರು: ನಿನ್ನೆ (ನ.8) ತಾನೆ ಹಿಂದೆ ಸಚಿವ ಸುಧಾಕರ್​ ಕಾಂಗ್ರೆಸ್​ಗೆ ಉತ್ತರಿಸುತ್ತಾ ಯಾರೂ ಬಿಜೆಪಿ ಬಿಡಲ್ಲ ಎಂದಿದ್ದರು. ಆದರೆ ಇಂದು ಮಾಜಿ ಮುಖ್ಯಯಮಂತ್ರಿ ಯಡಿಯೂರಪ್ಪ ಆಪ್ತರಾಗಿರುವ ಹಿರೇಕೆರೂರು ಕ್ಷೇತ್ರದ ಮಾಜಿ ಶಾಸಕ, ಬಿಜೆಪಿಯ ಯು.ಬಿ ಬಣಕಾರ್​ ಪಕ್ಷ ತೊರೆದಿದ್ದಾರೆ.

ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಜೊತೆಗೆ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಮತ್ತು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಸದಸ್ಯತ್ವಕ್ಕೆ  ರಾಜೀನಾಮೆ ಕೊಟ್ಟಿದ್ದಾರೆ.

ಬಣಕಾರ್, ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಇ-ಮೇಲ್ ಮೂಲಕ ಹಾವೇರಿಯ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಸಲ್ಲಿಸಿದ್ದಾರೆ. 'ನ.11 ರಂದು ಹಿರೇಕೆರೂರಿನಲ್ಲಿ ಬೆಂಬಲಿಗರ ಜೊತೆ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇನೆ' ಎಂದಿದ್ದಾರೆ.

ಬೆಂಗಳೂರಿನಲ್ಲಿ ತಮ್ಮ ರಾಜೀನಾಮೆ ಕುರಿತು ಮಾಹಿತಿ ನೀಡಿರುವ ಬಣಕಾರ್ 'ನಾನು ಕಾರ್ಯಕರ್ತರ ಜತೆ ಚರ್ಚಿಸಿಯೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ಜಾಗದಲ್ಲಿ ಬೇರೆಯವರು ಇದ್ದಿದ್ದರೆ ನಾಲ್ಕೈದು ತಿಂಗಳ ಹಿಂದೆಯೇ ಪಕ್ಷ ಬಿಡುತ್ತಿದ್ದರು. ನನ್ನ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಯವರಿಗೂ ಗೊತ್ತಿತ್ತು' ಎಂದು ಹೇಳಿದರು.

ತಮ್ಮ ನಿರ್ಧಾರಕ್ಕೆ ಸ್ಪಷ್ಟನೆ ನೀಡಿರುವ ಮಾಜಿ ಶಾಸಕ 'ಹಿರೇಕೆರೂರು ಕ್ಷೇತ್ರದಲ್ಲಿ ನಾವು ಇಬ್ಬರು ನಾಯಕರು ಇದ್ದೆವು. ಇಬ್ಬರ ನಡುವೆ ಹೊಂದಾಣಿಕೆ ಆಗಲಿಲ್ಲ. ಯಡಿಯೂರಪ್ಪ ನಮ್ಮಿಬ್ಬರನ್ನೂ ಪಕ್ಷದ ಎರಡು ಕಣ್ಣುಗಳು ಅಂದಿದ್ದರು. ಅದಲ್ಲದೆ ಸಚಿವ ಬಿ ಸಿ‌ ಪಾಟೀಲ್​ರಿಂದ ನನಗೆ ಕಿರುಕುಳ ಇತ್ತು. ಹಾಗಾಗಿ ನಾನು ಪಕ್ಷ ಬಿಡುವ ನಿರ್ಧಾರ ಮಾಡಿದ್ದೇನೆ' ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net