

ಚಿಕ್ಕೋಡಿ: ಮಾಜಿ ಶಾಸಕ, ಜೆಡಿಎಸ್ ಮುಖಂಡ ಕಲ್ಲಪ್ಪ ಮಗೆಣ್ಣನವರ ಪ್ರಯಾಣಿಸುತ್ತಿದ್ದ ಕಾರು ಬೆಳಗಾವಿಯ ಅಥಣಿ ಪಟ್ಟಣದ ಹೊರವಲಯದಲ್ಲಿ ಅಪಘಾತಕ್ಕೀಡಾಗಿದೆ.
ವಿಜಯಪುರದಿಂದ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮಕ್ಕೆ ಮಾಜಿ ಶಾಸಕರು ಸೇರಿದಂತೆ 6 ಜನರು ಕಾರಿನಲ್ಲಿ ಶುಕ್ರವಾರ ರಾತ್ರಿ ತೆರಳುತ್ತಿದ್ದರು. ಮಾರ್ಗದಲ್ಲಿ ರಸ್ತೆಯಲ್ಲಿ ಚಲಿಸುತ್ತಿದ್ದ ಲಾರಿಯೊಂದರ ಟೈಯರ್ ಬ್ಲಾಸ್ಟ್ ಆಗಿ ಕಾರಿನ ಮೇಲೆ ಟೈಯರ್ ಬಿದ್ದ ಪರಿಣಾಮ, ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಪಲ್ಟಿಯಾಗಿದೆ.
ಲಾರಿಯು ಅಥಣಿಯಿಂದ ವಿಜಯಪುರದತ್ತ ಸಾಗುತ್ತಿತ್ತು. ಮಾಜಿ ಶಾಸಕರು ಸ್ವಗ್ರಾಮ ಮಾಂಜರಿಗೆ ಕಾರಿನಲ್ಲಿ ತೆರಳುತ್ತಿದ್ದರು. ಅಪಘಾತದಲ್ಲಿ ಕಾರಿನಲ್ಲಿದ್ದ ಮಗೆಣ್ಣವರ ಸೇರಿದಂತೆ 6 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಥಣಿ ಪೊಲೀಸ್ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.