

ವಾಷಿಂಗ್ಟನ್: ಕಳೆದ ವರ್ಷ ಪ್ರಪಂಚಾದ್ಯಂತ ಸದ್ದು ಮಾಡಿದ್ದ ಆಫ್ರಿಕನ್ ಅಮೆರಿಕನ್ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿನ್ನೆಪೊಲೀಸ್ ನಗರದ ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚುವಿನ್ ಮೇಲಿನ ಆರೋಪ ಸಾಭೀತಾಗಿದ್ದರಿಂದ ಅವರಿಗೆ 40 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.
ಮಿನ್ನೆಸೋಟಾ ರಾಜ್ಯದ ಮಿನ್ನೆಪೊಲೀಸ್ ನಗರ ಜೂರಿ ನ್ಯಾಯಾಲಯ ಮಂಗಳವಾರ ಈ ತೀರ್ಪು ನೀಡಿದೆ. 2020 ರ ಏಪ್ರಿಲ್ 26 ರಂದು ಮಿನ್ನೆಪೊಲೀಸ್ ನಗರದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಕರಿಯ ಜನಾಂಗದ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಮೇಲೆ ಡೆರೆಕ್ ಚುವಿನ್ ದರ್ಪ ತೋರಿದ್ದಲ್ಲದೇ ಆತನ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರುಗಟ್ಟಿಸಿ ಕೊಂದಿದ್ದ. ಇದಕ್ಕೆ ಸಂಬಂಧಿಸಿದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು. ನಂತರ ಅಮೆರಿಕ ಸೇರಿದಂತೆ ಪ್ರಪಂಚದ ವಿಡಿದೆಡೆ ಜನಾಂಗೀಯ ತಾರತಮ್ಯದ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು.
ನಂತರ ಪೊಲೀಸ್ ಅಧಿಕಾರಿ ಡೆರೆಕ್ ಚುವಿನ್ರನ್ನು ಬಂಧಿಸಿ ಕಳೆದ ಒಂದು ವರ್ಷದಿಂದ ವಿಚಾರಣೆ ನಡೆಸಲಾಗಿತ್ತು. ವಿಚಾರಣೆಯಲ್ಲಿ ಡೆರೆಕ್ ಮೇಲಿನ ಆರೋಪ ಸಾಭೀತಾಗಿರುವುದರಿಂದ ಕಠಿಣ ಕಾರಾಗೃಹ ಶಿಕ್ಷೆಯನ್ನು ನೀಡಲಾಗಿದೆ.
ಇನ್ನು ಈ ತೀರ್ಪನ್ನು ಅಮೆರಿಕಾದ್ಯಂತ ಕರಿಯ ಜನಾಂಗದವರು ಸ್ವಾಗತಿಸಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಫ್ಲಾಯ್ಡ್ ಸಹೋದರ, ಇವಾಗ ನಮಗೆ ಉಸಿರು ಬಂದಂತಾಗಿದೆ ಎಂದಿದ್ದಾರೆ. ಅಲ್ಲದೇ ಯುಎಸ್ ಅಧ್ಯಕ್ಷ ಜೋ ಬೈಡನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾಗೂ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಸ್ವಾಗತ ಮಾಡಿದ್ದಾರೆ.