

ಬೆಂಗಳೂರು: ಸ್ಥಾನ ವಂಚಿತರ ಸಿಟ್ಟು-ಸೆಡವು, ಅಸಮಾಧಾನ ಸರಿಪಡಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಸರತ್ತು ನಡೆಸಿದ್ದು, ಕೆಲ ಹಿರಿಯ ನಾಯಕರೂ ಸಕಾರಾತ್ಮಕವಾಗಿ ಸ್ಪಂದಿಸಲಾರಂಭಿಸಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷ, ಪದಾಧಿಕಾರಿಗಳ ನೇಮಕ, ವಿಧಾನಮಂಡಲ ಉಭಯ ಸದನಗಳ ಹುದ್ದೆಗಳ ಭರ್ತಿಯು ವರಿಷ್ಠರ ನಿರ್ಧಾರದಂತೆ ಆಗಿದೆ. ರಾಜ್ಯ ನಾಯಕರ ಅಭಿಪ್ರಾಯಗಳನ್ನು ಪರಿಗಣಿಸಿದ್ದಾರೆ ಎಂಬ ‘ವಸ್ತುಸ್ಥಿತಿ’ಯು ಬಹುತೇಕರಿಗೆ ಮನವರಿಕೆಯಾಗಿದೆ.
ಒಂದಿಬ್ಬರು ಬಿಟ್ಟರೆ ಉಳಿದೆಲ್ಲರೂ ಪಕ್ಷದ ಸಂಘಟನೆಗೆ ಶ್ರಮಿಸಲು ಆಸಕ್ತಿ ವ್ಯಕ್ತಪಡಿಸುತ್ತಿದ್ದರೆ, ಮಾಜಿ ಸಚಿವ ವಿ.ಸೋಮಣ್ಣ ವರಿಷ್ಠರ ಸಮಕ್ಷಮ ರಾಜಿಸಂಧಾನಕ್ಕೆ ಒಲವು ತೋರಿದ್ದು, ತಪ್ಪುಗಳನ್ನು ಸರಿಪಡಿಸುವ ವಿಶ್ವಾಸವನ್ನೂ ಹೊಂದಿದ್ದಾರೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ದೆಹಲಿ ನಾಯಕರು ಮುಕ್ತವಾಗಿ ಮಾತುಕತೆ ನಡೆಸಿ, ನೀಡಲಿರುವ ನಿರ್ದೇಶನದಂತೆ ನಡೆದುಕೊಳ್ಳಲು ಉತ್ಸುಕರಾಗಿದ್ದಾರೆ. ನೇರ ಮಾತುಕತೆಯು ತಾಪತ್ರಯಗಳನ್ನು ಬಗೆಹರಿಸಲಿದೆ ಎಂಬ ನಿಲುವು ತಳೆದಿದ್ದಾರೆ.
ವರಿಷ್ಠರಿಂದ ಈ ಹಿಂದೆಯೇ ಕರೆಬಂದಿತ್ತು. ಕಾರಣಾಂತರಗಳಿಂದ ಹೋಗಲಾಗಿಲ್ಲ. ಆದರೆ ನನಗೆ ಆಗಿರುವ ತೊಂದರೆ ವರಿಷ್ಠರ ಗಮನಕ್ಕೆ ತಂದು, ಕೆಲವರ ಸಮ್ಮುಖದಲ್ಲಿ ಚರ್ಚಿಸುವಂತೆ ಮನವಿ ಮಾಡಿಕೊಂಡಿರುವೆ ಎಂದು ವಿ.ಸೋಮಣ್ಣ ಹೇಳಿದರು.
ವಿಜಯನಗರದ ತಮ್ಮ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಕುವೆಂಪು ಜಯಂತಿ, ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಎರಡು ಕ್ಷೇತ್ರಗಳಲ್ಲಿ ನನಗಾಗಿರುವ ಸೋಲು ಕಾಂಗ್ರೆಸ್‌ನಿಂದಲ್ಲ. ಇದನ್ನೂ ವರಿಷ್ಠರಿಗೆ ತಿಳಿಸಿದ್ದು, ಜನವರಿ 7 ಅಥವಾ 8ರಂದು ದೆಹಲಿಗೆ ತೆರಳಬೇಕೆಂದಿದ್ದೇನೆ ಎಂಬ ಇಂಗಿತ ವ್ಯಕ್ತಪಡಿಸಿದರು. ಅಯೋಧ್ಯೆ ರಾಮನ ಜನ್ಮಭೂಮಿ ಮಾತ್ರವಲ್ಲ, ಭಾರತದ ಭವಿಷ್ಯ. ಭವ್ಯ ರಾಮಮಂದಿರ ನಿರ್ಮಾಣದ ಕನಸು ನನಸಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಂದ ಇದು ಸಾಧ್ಯವಾಗಲಿದೆ ಎಂದು ಯಾರೂ ಅಂದುಕೊಂಡಿರಲಿಲ್ಲ.
ರಾಮಮಂದಿರ ನಿರ್ಮಾಣ ವಿರೋಧಿಸಿ ಅರ್ಜಿ ಕೊಟ್ಟವರೇ ಇದೀಗ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಬರುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ನಾನು ನಿಂತ ನೀರಲ್ಲ, ಹರಿಯುವ ನೀರು ಆದರೂ ಕಾಂಗ್ರೆಸ್‌ಗೆ ಹೋಗಲ್ಲ. ಆ ಪಕ್ಷದ ಅಭ್ಯರ್ಥಿಯೂ ಆಗುವುದಿಲ್ಲ ಎಂದು ನೆರೆದಿದ್ದ ಕಾರ್ಯಕರ್ತರಿಗೆ ವಿ.ಸೋಮಣ್ಣ ಮನವರಿಕೆ ಮಾಡಿಕೊಟ್ಟರು.
ಹಿರಿಯಣ್ಣ ವಿ.ಸೋಮಣ್ಣ ಅವರು ಹೊಸ ಹುರುಪಿನೊಂದಿಗೆ ಪಕ್ಷದ ಸಂಘಟನೆಗೆ ಮುಂದಾಗಿದ್ದು, ಎಲ್ಲವೂ ನಿವಾರಣೆಯಾಗಿದೆ. ಬಿಜೆಪಿಯಲ್ಲಿ ಎಲ್ಲವೂ ತಿಳಿಯಾಗಿದೆ ಎಂದು ಮಾಜಿ ಸಚಿವ ಕೆ.ಶಿವನಗೌಡ ನಾಯಕ ಹೇಳಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾದರಿಯಲ್ಲಿ ಬಿ.ವೈ.ವಿಜಯೇಂದ್ರ ಅವರು ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ, ಹಿರಿಯರಿಗೆ ಗೌರವ ನೀಡುವ ಕೆಲಸ ಮಾಡುತ್ತಿದ್ದಾರೆ. ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಬೇಕು ಎನ್ನುವುದು ಕಾರ್ಯಕರ್ತರ ಬಯಕೆ. ಇದಕ್ಕಾಗಿ ವಿಜಯೇಂದ್ರ ಅವರ ಕೈಬಲಪಡಿಸುವ ಅಗತ್ಯವಿದೆ ಎಂದರು.