ಗೋವಾ ಮಾಜಿ ಸಿಎಂ ವಿರುದ್ಧ ಶಿಸ್ತುಕ್ರಮ; ಕಾರ್ಯಕಾರಿ ಸಮಿತಿಯಿಂದಲೇ ಕಿತ್ತೊಗೆದ ಕಾಂಗ್ರೆಸ್​..

Digambar Kamath
Published on

ನವದೆಹಲಿ: ಬಿಜೆಪಿ ಜೊತೆ ಕೈಜೋಡಿಸಿ ಕಾಂಗ್ರೆಸ್​ ವಿರುದ್ಧವೇ ಷಡ್ಯಂತ್ರ ನಡೆಸಿದ ಆರೋಪಕ್ಕೆ ಒಳಗಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗೋವಾ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ವಿರುದ್ಧವೂ ಶಿಸ್ತುಕ್ರಮ ಜರುಗಿದೆ.

ಗೋವಾದಲ್ಲಿನ ವಿಪಕ್ಷ ನಾಯಕ, ಕಾಂಗ್ರೆಸ್​ನ ಮೈಕೆಲ್ ಲೋಬೋ ಮತ್ತು ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಅವರು ಬಿಜೆಪಿ ಜೊತೆ ಕೈಜೋಡಿಸಿ ಕಾಂಗ್ರೆಸ್​ ವಿರುದ್ಧವೇ ಷಡ್ಯಂತ್ರ ನಡೆಸಿರುವುದು ಮೊನ್ನೆಮೊನ್ನೆಯಷ್ಟೇ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮೈಕೆಲ್ ಲೋಬೋವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಪಕ್ಷ ನಾಯಕ ಸ್ಥಾನದಿಂದ ತೆಗೆದು ಹಾಕಿದ್ದಾಗಿ ಜುಲೈ 10ರಂದು ಸುದ್ದಿಗೋಷ್ಠಿ ನಡೆಸಿದ್ದ ಗೋವಾ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ತಿಳಿಸಿದ್ದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ದಿಗಂಬರ್ ಕಾಮತ್ ವಿರುದ್ಧವೂ ಶಿಸ್ತುಕ್ರಮ ಜರುಗಿದೆ. ಕಾಂಗ್ರೆಸ್​ನ ಉನ್ನತ ನಿರ್ಣಾಯಕ ಅಂಗವಾದ ಕಾರ್ಯಕಾರಿ ಸಮಿತಿಯಿಂದ ದಿಗಂಬರ್ ಕಾಮತ್ ಅವರನ್ನು ಪಕ್ಷವು ಕಿತ್ತೊಗೆದಿದೆ. ಕಾಂಗ್ರೆಸ್​ ಕಾರ್ಯಕಾರಿ ಸಮಿತಿಯಲ್ಲಿನ ಶಾಶ್ವತ ಆಹ್ವಾನಿತ ಸ್ಥಾನದಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ದಿಗಂಬರ್ ಕಾಮತ್ ಅವರನ್ನು ಪಕ್ಷದ ಅಧ್ಯಕ್ಷರು ತೆಗೆದಿದ್ದಾರೆ ಎಂಬುದಾಗಿ ಕಾಂಗ್ರೆಸ್ ಮೂಲಗಳು ತಿಳಿಸಿವೆ. ಅಲ್ಲದೆ ಪಕ್ಷವು ದಿಗಂಬರ್ ಕಾಮತ್ ಮತ್ತು ಮೈಕೆಲ್ ಲೋಬೋ ಇಬ್ಬರನ್ನೂ ಸದನದಿಂದ ಅನರ್ಹಗೊಳಿಸುವಂತೆ ಸ್ಪೀಕರ್​ ರಮೇಶ್​ ತವಡ್ಕರ್ ಅವರಲ್ಲಿ ಮನವಿ ಮಾಡಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net