

ಡೆಹ್ರಾಡೂನ್: ಕಾಂಗ್ರೆಸ್ ನಾಯಕ ಮತ್ತು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಗುರುವಾರ ಬೆಳಗ್ಗೆ ಡೆಹ್ರಾಡೂನ್ನಲ್ಲಿ ಮುನ್ಸಿಪಲ್ ಸಂಸ್ಥೆ ಚುನಾವಣೆಯಲ್ಲಿ ಮತ ಚಲಾಯಿಸಲು ತೆರಳಿದರೂ, ಅವರಿಗೆ ಮತ ಹಾಕಲು ಸಾಧ್ಯವಾಗಿಲ್ಲ. ಕಾರಣ ಮತದಾರರ ಪಟ್ಟಿಯಲ್ಲಿ ಅವರು ಹೆಸರು ಕಂಡುಬಂದಿಲ್ಲ!
2022ರ ಅಸೆಂಬ್ಲಿ ಚುನಾವಣೆಯಲ್ಲಿ ಡೆಹ್ರಾಡೂನ್ನ ನಿರಂಜನ್ಪುರದಿಂದ ರಾವತ್ ಮತ ಚಲಾಯಿಸಿದ್ದರು. ಆದರೆ ಈಗ ಮತದಾರರ ಪಟ್ಟಿಯಿಂದ ಅವರ ಹೆಸರು ಕಣ್ಮರೆಯಾಗಿದೆ. ಮತ ಹಾಕಲು ಹೋದಾಗ, ಈ ಬಗ್ಗೆ ಈಗ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ಅಲ್ಲಿದ್ದ ಸಿಬ್ಬಂದಿ ಹೇಳಿದ್ದಾರೆ.
ರಾವತ್ 2009 ರಿಂದ ಡೆಹ್ರಾಡೂನ್ನ ನಿರಂಜನಪುರದಿಂದ ಮತ ಹಾಕುತ್ತಿದ್ದಾರೆ. ನಾನು ಬೆಳಿಗ್ಗೆಯಿಂದ ಕಾದಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ನಾನು ಮತ ಚಲಾಯಿಸಿದ ಮತಗಟ್ಟೆಯಲ್ಲಿ ನನ್ನ ಹೆಸರು ಕಂಡುಬಂದಿಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿರುವ ರಾವತ್, ನಾನು ಮೊದಲೇ ಬಿಜೆಪಿ ಬಗ್ಗೆ ಎಚ್ಚೆತ್ತುಕೊಳ್ಳಬೇಕಿತ್ತು. ಪಟ್ಟಿಗೆ ಹೆಸರು ಸೇರಿಸಲು ಮತ್ತು ತೆಗೆದುಹಾಕುವಲ್ಲಿ ಬಿಜೆಪಿಯವರು ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಹೆಚ್ಚು ಜಾಗರೂಕನಾಗಿರಬೇಕಿತ್ತು ಎಂದು ರಾವತ್ ಕಿಡಿಕಾರಿದ್ದಾರೆ.