ಹೆಚ್ಚಿನ ಮತಗಳ ಅಂತರದ ಗೆಲುವು

yadiurapa
ಶಿಕಾರಿಪುರದಲ್ಲಿ ಶ್ರೀ ಹುಚ್ಚರಾಯಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಬಿ. ಎಸ್.ಯಡಿಯೂರಪ್ಪ, ಬಿ.ವೈ.ರಾಘವೇಂದ್ರ, ಬಿ.ವೈ. ವಿಜಯೇಂದ್ರ ಪಾಲ್ಗೊಂಡಿದ್ದರು.
Published on

ಶಿಕಾರಿಪುರ: ಲೋಕಸಭಾ ಚುನಾವಣೆಯಲ್ಲಿ ಮತದಾರರ ಆಶೀರ್ವಾದ ಮತ್ತು ಶ್ರೀ ಹುಚ್ಚರಾಯಸ್ವಾಮಿ ಅನುಗ್ರಹದಿಂದ ಕಳೆದ ಬಾರಿಗಿಂತ ಹೆಚ್ಚಿನ ಮತಗಳ ಅಂತರದಿಂದ ಸಂಸದ ಬಿ.ವೈ.ರಾಘವೇಂದ್ರ ಗೆದ್ದು ಬರಲಿದ್ದಾರೆ. ನಾವು ಕರ್ನಾಟಕದಲ್ಲಿ 28 ಸ್ಥಾನಗಳನ್ನೂ ಗೆಲ್ಲುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಶ್ರೀ ಹುಚ್ಚರಾಯಸ್ವಾಮಿ ಬ್ರಹ್ಮರಥೋತ್ಸವದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀ ಹುಚ್ಚರಾಯಸ್ವಾಮಿ ಆಶೀರ್ವಾದವನ್ನು ನಾವು ಪಡೆದಿದ್ದೇವೆ. ಅವನ ದರ್ಶನದಿಂದಲೇ ಸರ್ವ ಸಂಕಷ್ಟಗಳು ದೂರವಾಗುತ್ತವೆ. ಅವನನ್ನು ನಂಬಿದವರನ್ನು ಎಂದಿಗೂ ಕೈ ಬಿಡದಂತಹ ಮಹಾದೈವ ಎಂದರು.
ಜೆಡಿಎಸ್ ಮೈತ್ರಿಯಿಂದ ನಮಗೆ ಭೀಮಬಲ ಬಂದಿದೆ. ದೇಶದ ಜನ ಈಗಾಗಲೇ ಮೋದಿ ಪ್ರಧಾನಿಯಾಗಬೇಕು ಎಂದು ಸಂಕಲ್ಪ ಮಾಡಿದ್ದಾರೆ. ಮೋದಿ ಮತ್ತೆ ಪ್ರಧಾನಿಯಾಗಿ ವಿಜೃಂಭಿಸಲಿದ್ದಾರೆ ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮಾತನಾಡಿ, ಬಿಜೆಪಿಗೆ ತನ್ನದೇ ಆದ ಶಿಸ್ತು ಮತ್ತು ಅನುಶಾಸನವಿದೆ. ಪಕ್ಷ ತನ್ನ ಸಿದ್ಧಾಂತದಡಿ ಕ್ರಮ ಕೈಗೊಂಡಿದೆ. ಸ್ವತಃ ಮೋದಿಜಿಯವರೇ ನನ್ನನ್ನು ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಹೇಳಿದಾಗಲೂ ಕೆ.ಎಸ್.ಈಶ್ವರಪ್ಪ ಅವರು ಮೋದಿ ಅವರ ಫೋಟೋ ಹಾಕಿಕೊಂಡು ಓಡಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಅವರು ಹಿರಿಯರು. ಕಳೆದ ಚುನಾವಣೆಯಲ್ಲಿ ಅವರ ಆಶೀರ್ವಾದ ನನಗೆ ದೊರಕಿತ್ತು. ಈ ಬಾರಿ ಇಲ್ಲವಲ್ಲ ಎಂದು ಬೇಸರವಾಗುತ್ತಿದೆ ಎಂದರು.
ಬೈಂದೂರಿನಲ್ಲಿ ಬಿಜೆಪಿ ಸದೃಢವಾಗಿದ್ದು ಮಹಿಳಾ ಸಮಾವೇಶದಲ್ಲಿ ಮಹಿಳಾಶಕ್ತಿ ಅನಾವರಣವಾಗಿದೆ. ತಮಿಳುನಾಡಿನ ಪಕ್ಷದ ನಾಯಕ ಕೆ.ಅಣ್ಣಾಮಲೈ ಅವರು ಕೇರಳದಿಂದ ಭದ್ರಾವತಿಗೆ ಬಂದು ಸಮಾವೇಶದಲ್ಲಿ ಪಾಲ್ಗೊಂಡು, ನಂತರ ಶಿವಮೊಗ್ಗದ ಮಿಳ್ಳಘಟ್ಟದಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಮತದಾರರು ಪ್ರಬುದ್ಧ ಮತ್ತು ಪ್ರಜ್ಞಾವಂತರಾಗಿದ್ದು ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದರು.
ಉಚಿತವಾಗಿ ಗ್ಯಾರಂಟಿ ಯೋಜನೆ ಜಾರಿ ಮಾಡಿದ ಕಾಂಗ್ರೆಸ್ ಆ ಹಣಕ್ಕಾಗಿ ನೋಂದಣಿ ಶುಲ್ಕ, ಅಬಕಾರಿ ಶುಲ್ಕ ಹೆಚ್ಚಳ ಮಾಡಿದೆ. ಹಲವು ಕಡೆಗಳಲ್ಲಿ ಗ್ಯಾರಂಟಿ ಯೋಜನೆಗಾಗಿ ಹಣ ಹೊಂದಿಸಲು ಹೆಣಗಾಡುತ್ತಿದೆ. ಬಿಜೆಪಿ ಚೊಂಬು ಎನ್ನುವ ಇವರು ಸ್ವಾತಂತ್ರಾೃನಂತರ ದೇಶವನ್ನು ಲೂಟಿ ಹೊಡೆದು ಖಾಲಿ ಚೊಂಬು ಮಾಡಿದ್ದರು. ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದಾರೆ. ಇವರ ಯೋಗ್ಯತೆಗೆ ಕೇಂದ್ರದಲ್ಲಿ ವಿಪಕ್ಷ ನಾಯಕ ಸ್ಥಾನ ಸಿಗದಷ್ಟು ಕಡಿಮೆ ಸ್ಥಾನಗಳು ಬಂದಿವೆ ಎಂದು ಹೇಳಿದರು.
ಮುಖಂಡರಾದ ಕೆ.ಎಸ್.ಗುರುಮೂರ್ತಿ, ರಾಘವೇಂದ್ರ, ಹುಲ್ಮಾರ್ ಮಹೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net