

ಬೆಂಗಳೂರು: ಮೂರು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಚೇತರಿಸಿಕೊಂಡಿದ್ದಾರೆ. ಸದ್ಯ ಅವರ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದ್ದಾಗಿ ವೈದ್ಯರು ತಿಳಿಸಿದ್ದಾರೆ.
ತೀವ್ರ ಜ್ವರದಿಂದ ಬಳಲುತ್ತಿದ್ದ ಎಸ್.ಎಂ.ಕೃಷ್ಣ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರೀಗ ಸಂಪೂರ್ಣ ಆರೋಗ್ಯವಾಗಿದ್ದಾರೆ. ಇನ್ನು ಎರಡು ಅಥವಾ ಮೂರು ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಲಿದ್ದಾರೆ. ಆ ಬಳಿಕ ಸಂಪೂರ್ಣ ವಿಶ್ರಾಂತಿಗೆ ಸಲಹೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕೃಷ್ಣ ಕೃತಜ್ಞತೆ: ಕಳೆದ ಮೂರು ದಿನಗಳಿಂದ ತಮ್ಮ ಆರೋಗ್ಯದ ಬಗ್ಗೆ ಆತಂಕಗೊಂಡು ಚೇತರಿಕೆಗೆ ಹಾರೈಸಿದ ಹಿತೈಷಿಗಳು, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಎಸ್.ಎಂ. ಕೃಷ್ಣ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ ಯಾರೂ ತಮ್ಮ ಆರೋಗ್ಯದ ಬಗ್ಗೆ ಆತಂಕಕ್ಕೆ ಒಳಗಾಗುವುದು ಬೇಡ ಎಂದೂ ಹೇಳಿದ್ದು, ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯಗಳನ್ನೂ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಇಂದು ಎಸ್.ಎಂ. ಕೃಷ್ಣ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.