

ಹುಬ್ಬಳ್ಳಿ: ಬಿಜೆಪಿ ಟಿಕೆಟ್ ಮಿಸ್ ಆದ ಹಿನ್ನೆಲೆಯಲ್ಲಿ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್, ನಾನು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಮತ್ತು ಇನ್ನೂ ಹತ್ತು ವರ್ಷಗಳ ಕಾಲ ಸಕ್ರೀಯ ರಾಜಕಾರಣದಲ್ಲಿ ಇರುತ್ತೇನೆ ಎಂದಿದ್ದಾರೆ.
ಬಿಜೆಪಿ ಹೈಕಮಾಂಡ್ನಿಂದ ಬುಲಾವ್ ಹಿನ್ನೆಲೆಯಲ್ಲಿ ದೆಹಲಿಗೆ ತೆರಳುವ ಮುನ್ನ ಹುಬ್ಬಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕಾದು ನೋಡಿ ಎನ್ನುವ ಮೂಲಕ ಟಿಕೆಟ್ ಕೈ ತಪ್ಪಿದ್ದೇ ಆದರೆ ಬಂಡಾಯದ ಮುನ್ಸೂಚನೆ ನೀಡಿದರು.
ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ
ರಾಷ್ಟ್ರೀಯ ನಾಯಕರನ್ನು ಭೇಟಿಯಾಗಲು ದೆಹಲಿಗೆ ತೆರಳುತ್ತಿದ್ದೇನೆ. ನನಗೆ ಸಕಾರಾತ್ಮಕ ಸ್ಪಂದನೆ ಸಿಗುವ ಭರವಸೆ ಇದೆ. ನಿನ್ನೆ ಪಕ್ಷದ ವರಿಷ್ಟರ ಜೊತೆ ಮಾತನಾಡಿದ್ದೇನೆ. ಟಿಕೆಟ್ ವಿಚಾರವಾಗಿ ನನಗೆ ವರಿಷ್ಠರು ಇಂದು ಸ್ಪಷ್ಟತೆಯನ್ನು ತಿಳಿಸಲಿದ್ದಾರೆ. ಒಬ್ಬ ಶಾಸಕನಾಗಿ ಎರಡು ವರ್ಷಗಳಿಂದ ಯಾವುದೇ ಸ್ಥಾನಮಾನ ಇಲ್ಲದೇ ಅಭಿವೃದ್ದಿ ಕೆಲಸಗಳನ್ನ ಮಾಡಿದ್ದೇನೆ. ಸಚಿವ ಸ್ಥಾನ ಇಲ್ಲದೆನೂ ಕೆಲಸ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದೇನೆ. ನಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದರು.
ಭರವಸೆ ಇದೆ
ನಾನು ರಾಜಕೀಯಕ್ಕೆ ಬಂದಿರುವುದೇ ಆಕಸ್ಮಿಕ. ನಾನು ಯಾವುದೇ ಸಂದರ್ಭದಲ್ಲಾದರೂ ರಾಜಕೀಯ ನಿವೃತ್ತಿ ಪಡೆದುಕೊಳ್ಳಲು ಸಿದ್ಧನಿದ್ದೆ. ಯಾರೇ ಆಗಲಿ ಗೌರವಯುತವಾಗಿ ಚುನಾವಣಾ ರಾಜಕೀಯದಿಂದ ಹೊರ ಹೋಗಬೇಕು. ಈ ರೀತಿ ಹೊರ ಹೋಗುವುದು ಸರಿಯಲ್ಲ. ನನ್ನ ಸಾಫ್ಟ್ ಕಾರ್ನರ್ ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ. ರಾಷ್ಟ್ರೀಯ ಅಧ್ಯಕ್ಷರನ್ನ ಭೇಟಿಯಾಗಿ ಬಂದ ಮೇಲೆ ನನ್ನ ನಿರ್ಧಾರ ಪ್ರಕಟ ಮಾಡುತ್ತೇನೆ. ವರಿಷ್ಠರಿಂದ ನನಗೆ ಸಕಾರಾತ್ಮಕ ಸ್ಪಂದನೆ ಸಿಗುವ ಭರವಸೆ ಇದೆ ಎಂದು ಹೇಳಿದರು.
ಸೀನಿಯರ್ಸ್ ಅಂದ್ರೆ ಯಾರು?
ಸೀನಿಯರ್ಸ್ ಅಂದ್ರೆ ಯಾರೂ ಎಂದು ಪ್ರಶ್ನೆ ಮಾಡಿದ ಜಗದೀಶ್ ಶೆಟ್ಟರ್, ವಯಸ್ಸೋ ಅಥವಾ ರಾಜಕಾರಣದಲ್ಲಿ ಸೀನಿಯರ್ಸೋ? ಟಿಕೆಟ್ ಸಿಕ್ಕವರಲ್ಲಿ 75, 76 ವರ್ಷದವರು ಇದಾರೆ. ಅವರಿಗೆ ಸೀನಿಯರ್ಸ್ ಅನ್ನೋದಿಲ್ವಾ ನೀವು? ರಾಷ್ಟ್ರೀಯ ನಾಯಕರ ಭಾವನೆಮೇಲೆ ನನ್ನ ನಿರ್ಧಾರ ಅಡಗಿದೆ ಎಂದು ತಿಳಿಸಿದರು.
ಶೆಟ್ಟರ್ ಅವರ ಹೇಳಿಕೆ ಹೈಕಮಾಂಡ್ಗೆ ನಡುಕ ಹುಟ್ಟಿಸಿದೆ ಎನ್ನಲಾಗಿದೆ. ಅದೇ ಕಾರಣಕ್ಕಾಗಿ ಶೆಟ್ಟರ್ ಅವರನ್ನು ಸಮಾಧಾನ ಮಾಡಲು ಕಮಲ ಕಲಿಗಳು ದೆಹಲಿಗೆ ಕರೆದಿದ್ದಾರೆ. ಸ್ವತಃ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಪೋನ್ ಮಾಡಿ ದೆಹಲಿಗೆ ಬರುವಂತೆ ಸೂಚನೆ ನೀಡಿದ್ದು, ಇಂದು ಬೆಳಗ್ಗೆಯೇ ದೆಹಲಿಗೆ ತೆರಳಿದ್ದಾರೆ. (ದಿಗ್ವಿಜಯ ನ್ಯೂಸ್)