

ಬೆಂಗಳೂರು: ಮನೆಯಲ್ಲಿ ನೋಟು ಎಣಿಸುವ ಯಂತ್ರ ಇಟ್ಟುಕೊಂಡವನು ನಾನಲ್ಲ. ನಿಮ್ಮ ಮೇಲೆ ಅತ್ಯಾಚಾರ ನಡೆದರೆ ಸರ್ಕಾರ ಏನು ಮಾಡೋಕಾಗುತ್ತೆ ಎಂದು ವರದಿಗಾರ್ತಿಗೆ ಪೆಕರನಂತೆ ಪ್ರಶ್ನಿಸಿದವನೂ ನಾನಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ, ಸಚಿವ ಕೆ.ಎಸ್.ಈಶ್ವರಪ್ಪಗೆ ತಿರುಗೇಟು ನೀಡಿದ್ದಾರೆ.
‘ಅಂದು ತಿನ್ನಲು ಗತಿ ಇಲ್ಲದವರು ಮಾತ್ರ ಸೈನ್ಯಕ್ಕೆ ಸೇರುತ್ತಾರೆಂದು ಹೇಳಿದ ಈ ಯುಗಪುರುಷ ಪುಲ್ವಾಮ ದಾಳಿಗೆ ಭಾರತೀಯ ಸೈನ್ಯ ಪ್ರತ್ಯುತ್ತರ ನೀಡಿದಾಗ ಸಂಭ್ರಮಾಚರಣೆ ಮಾಡಬೇಡಿ. ಒಂದು ಕೋಮಿಗೆ ಬೇಜಾರಾಗುತ್ತದೆ ಎಂದೂ ಆಣಿಮುತ್ತುಗಳನ್ನು ಉದುರಿಸಿ ಅತ್ತಿದ್ದರು. ಇಂತಹ ಯುಗಪುರುಷನನ್ನು ಪಡೆದ ಕರ್ನಾಟಕವೇ ಧನ್ಯ’ಎಂದು ಈಶ್ವರಪ್ಪ ಟ್ವೀಟ್ ಮಾಡಿ ಎಚ್ಡಿಕೆ ಕೆಣಕಿದ್ದರು.
ಇದಕ್ಕೆ ಸರಣಿ ಟ್ವೀಟ್ ಮಾಡಿ ತಿರುಗೇಟು ನೀಡಿರುವ ಕುಮಾರಸ್ವಾಮಿ, ಡಿಸಿಎಂ ಹುದ್ದೆ ಯಾರಿಗೆ ಇಷ್ಟವಿಲ್ಲ? ವಯಸ್ಸಿಗೆ ಬಂದವರೆಲ್ಲರೂ ನಟಿ ಐಶ್ವರ್ಯ ರೈ ಬೇಕೆಂದು ಬಯಸುತ್ತಾರೆ. ಇರುವುದು ಒಬ್ಬಳೇ ಐಶ್ವರ್ಯ ರೈ ತಾನೇ? ಎಂದು ಡಿಸಿಎಂ ಹುದ್ದೆ ಬಗ್ಗೆ ಕೀಳು ಅಭಿರುಚಿ ಮಾತನಾಡಿದವನು ನಾನಲ್ಲ ಎಂಬಿತ್ಯಾದಿಯಾಗಿ ಈಶ್ವರಪ್ಪ ಆಡಿದ ಹಳೆಯ ಮಾತುಗಳನ್ನು ಕೆದಕಿ ವಾಗ್ಬಾಣ ಬಿಟ್ಟಿದ್ದಾರೆ. ಮತ್ತೊಂದು ಟ್ವೀಟ್ನಲ್ಲಿ, ಎಂತೆಂತಹ ಅದ್ಭುತವಾದ ಆಣಿಮುತ್ತುಗಳನ್ನು ಉದುರಿಸಿದ ನಿಮ್ಮಿಂದ ಯುಗಪುರುಷ ಎಂಬ ಸರ್ಟಿಫಿಕೇಟ್ ಪಡೆಯುವ ‘ಮೂರ್ಖಪುರುಷ’ ನಾನಲ್ಲ. ದಿಢೀರ್ ನಿದ್ದೆಯಿಂದ ಎದ್ದಂತೆ ಹಳೆಯ ಹೇಳಿಕೆಗೆ ಟ್ವೀಟ್ ಮಾಡುವವನೂ ನಾನಲ್ಲ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.