

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಅ.25ರ ರಾತ್ರಿ 7.30ಕ್ಕೆ ಭೇಟಿಗೆ ಕಾಲಾವಕಾಶ ಗೊತ್ತುಪಡಿಸಿ ಬುಲಾವ್ ನೀಡಿದ್ದಾರೆ. ಈ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರ ದೆಹಲಿ ಪ್ರವಾಸ ಪಕ್ಷದ ಒಳ-ಹೊರಗೆ ಕುತೂಹಲ ಹುಟ್ಟಿಹಾಕಿತ್ತು.
ಪಕ್ಷದ ರಾಜ್ಯಾಧ್ಯಕ್ಷ, ವಿಧಾನಸಭೆ ಪ್ರತಿಪಕ್ಷ ನಾಯಕ ನೇಮಕದ ಬಗ್ಗೆ ಚರ್ಚಿಸಬಹುದು. ಜೆಡಿಎಸ್ ಜತೆಗೆ ಮೈತ್ರಿ ವಿರೋಧಿಸಿದ್ದೇಕೆ ? ಎಂಬ ಕಾರಣಗಳನ್ನು ತಿಳಿದುಕೊಂಡು ಸ್ಪಷ್ಟ ಸಂದೇಶವನ್ನು ಕಳುಹಿಸಲಿದ್ದಾರೆ ಎನ್ನುವ ತರ್ಕ ಪಕ್ಷದ ರಾಜ್ಯ ಸಮಿತಿಯೊಳಗೆ ನಡೆದಿತ್ತು.
ದೆಹಲಿಗೆ ಹೋಗಿದ್ದ ಡಿವಿಎಸ್ ಎರಡು ದಿನ ಬಿಡಾರ ಹೂಡಿದರೂ ನಡ್ಡಾ ಭೇಟಿ ಸಾಧ್ಯವಾಗದೆ ಬರಿಗೈಲಿ ವಾಪಸ್ಸಾಗಿದ್ದಾರೆ !. ಆದರೆ ರಾಜ್ಯ ವಿಧಾನಸಭೆ ಚುನಾವಣೆ ಉಸ್ತುವಾರಿಯಾಗಿದ್ದ ಕೇಂದ್ರ ಸಚಿವ ಧಮೇಂದ್ರ ಪ್ರಧಾನ್‌ರನ್ನು ಭೇಟಿ ಮಾಡಿರುವ ಕಾರಣ ಕುತೂಹಲ ತಣಿದಿಲ್ಲ.
ವರಿಷ್ಠರು ನೇರವಾಗಿ ಹೇಳಲು ಸಾಧ್ಯವಿಲ್ಲದ್ದನ್ನು ಪ್ರಧಾನ್ ಮೂಲಕ ಸದಾನಂದಗೌಡರಿಗೆ ರವಾನಿಸಿದರೆ ? ಎಂಬ ಪ್ರಶ್ನೆ ಪಕ್ಷದ ಪಡಸಾಲೆಯಲ್ಲಿ ಸುಳಿದಾಡುತ್ತಿದೆ. ಪ್ರಧಾನ್ ಭೇಟಿ ಬಗ್ಗೆ ಡಿವಿಎಸ್ ಗೌಪ್ಯತೆ ಕಾಯ್ದುಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
ದೆಹಲಿಯಿಂದ ಶುಕ್ರವಾರ ಹಿಂತಿರುಗಿದ ಡಿ.ವಿ.ಸದಾನಂದಗೌಡ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಬುಧವಾರ ಹೋದಾಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಪಿಎ ಸರಣಿ ಸಭೆಯಿರುವುದಾಗಿ ತಿಳಿಸಿದರು. ಗುರುವಾರ ಇಡೀ ದಿನ ಸರಣಿ ಸಭೆಯಿಂದ ನಡ್ಡಾ ಹೊರಬರಲಿಲ್ಲ.
ದೆಹಲಿ ಪ್ರಯಾಣಕ್ಕೆ ಮುನ್ನ ನಡ್ಡಾ ಅವರು ಹೊರಡಿಸಿದ್ದ ಆದೇಶದ ಪ್ರಕಾರ ಪ್ರಕಾರ ಸಂಸದ ಪಿ.ಸಿ.ಮೋಹನ್ ಜತೆಗೆ ತಮಿಳುನಾಡಿಗೆ ಹೋಗಬೇಕಿತ್ತು. ಈ ವಿಷಯ ವರಿಷ್ಠರ ಗಮನಕ್ಕೆ ತಂದಾಗ ಪಂಚರಾಜ್ಯಗಳ ಚುನಾವಣೆ ಇರುವುದರಿಂದ ಮತ್ತೆ ಮಾತನಾಡೋಣವೆಂದು ಹೇಳಿ ಕಳುಹಿಸಿದ್ದಾರೆ ಎಂದು ತಿಳಿಸಿದರು.
ನಾವು ಸ್ವಲ್ಪ ಪಕ್ಷದ ವ್ಯವಸ್ಥೆಗೆ ಪೂರಕವಾಗಿದ್ದೇವೆ, ಎಲ್ಲವನ್ನೂ ಸಹಿಸಿಕೊಳ್ಳಬೇಕು. ನೂರಕ್ಕೆ ನೂರರಷ್ಟು ನನಗೇನೂ ಬೇಸರವಿಲ್ಲ. ಪಂಚರಾಜ್ಯ ಚುನಾವಣೆ ಬಹಳ ಮುಖ್ಯ, ಅಭ್ಯರ್ಥಿಗಳ ಪಟ್ಟಿ ಇನ್ನೂ ಅಂತಿಮವಾಗಿಲ್ಲ. ಮೂರ‌್ನಾಲ್ಕು ದಿನಗಳ ಕಾಲ ತಮಿಳುನಾಡು ಪ್ರವಾಸ ಕೈಗೊಳ್ಳಲಿದ್ದು, ವಾಪಸ್ಸಾದ ಬಳಿಕ ವರಿಷ್ಠರು ಮತ್ತೆ ಕಾಲಾವಕಾಶ ನೀಡಿದರೆ ದೆಹಲಿಗೆ ಹೋಗುವೆ ಎಂದು ಹೇಳಿದರು.
ಎಚ್.ಡಿ.ಕುಮಾರಸ್ವಾಮಿ ಜತೆಗೂಡಿ ಹೋರಾಟ ನಡೆಸುವ ಬಗ್ಗೆ ಯಾವುದೇ ಸಂದೇಶ ಬಂದಿಲ್ಲ. ಯಾವ ರೀತಿಯ ಹೋರಾಟ ಎಂಬುದರ ಬಗ್ಗೆಯೂ ನಮ್ಮೊಂದಿಗೆ ಚರ್ಚೆ ಮಾಡಿಲ್ಲ ಎಂದು ಡಿ.ವಿ.ಸದಾನಂದಗೌಡ ಪ್ರತಿಕ್ರಿಯಿಸಿದರು.