

ವಿಜಯಪುರ: ರಾಜ್ಯಾದ್ಯಂತ ಮೈಕ್ರೋಫೈನಾನ್ಸ್ ಹಾವಳಿ ಹೆಚ್ಚಾಗಿದ್ದು, ಗ್ರಾಮೀಣ ಬಡ ಮಹಿಳೆಯರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಜಿಲ್ಲಾ ಮಟ್ಟದಲ್ಲಿ ಕಾವಲು ಸಮಿತಿ ರಚಿಸಲು ಸೂಚಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ತಿಳಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿ, ಮಹಿಳೆಯರಿಂದ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಮಹಿಳೆಯರು ಮೈಕ್ರೋಫೈನಾನ್ಸ್ ಹಾವಳಿಂದ ಬೇಸತ್ತಿದ್ದಾರೆ. ತಾಳಿ ಮಾರಿದ ಪ್ರಸಂಗವೂ ಕಂಡು ಬಂದಿದೆ. ಕಾಲಿಗೆ ಬಿದ್ದು ನ್ಯಾಯ ಕೇಳಿದ ವಿಜಯಪುರದ ಮಹಿಳೆಯ ಸ್ಥಿತಿ ಕರಳು ಚುರ್ ಎನ್ನಿಸುತ್ತದೆ. ಹೀಗಾಗಿ ಜಿಲ್ಲಾ ಮಟ್ಟದಲ್ಲಿ ಕಿರುಕುಳ ತಡೆಗೆ ಮತ್ತು ಜಾಗೃತಿಗಾಗಿ ಸಮಿತಿ ರಚಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದರು.
ಚೈತನ್ಯ ಮೈಕ್ರೋ ಫೈನಾನ್ಸ್, ಸಖಿ, ಧರ್ಮಸ್ಥಳ ಚಿಟ್ ಫಂಡ್ಸ್, ನಿರಂತರ, ನವಚೇತನ ಹೀಗೆ ಹಲವು ಹಣಕಾಸು ಸಂಸ್ಥೆಗಳ ಬಗ್ಗೆ ಹೆಚ್ಚು ಹೆಚ್ಚು ದೂರುಗಳು ಬಂದಿವೆ. ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ಸಂಬಂಧಿಸಿದಂತೆ ಕ್ಯಾಬಿನೆಟ್‌ನಲ್ಲೂ ಚರ್ಚೆಯಾಗಿದೆ. ರಾತ್ರಿ 11-12ರ ಸುಮಾರಿಗೆ ಮನೆಗೆಲ್ಲ ಬಂದು ಕಿರುಕುಳ ನೀಡುತ್ತಿದ್ದಾರಂತೆ. ಮಹಿಳೆಯರಿಗೆ ಸಾಯಿ ಸಾಯಿ ಎಂದು ಪ್ರಚೋದಿಸುತ್ತಾರಂತೆ. ಕಾರಣ ಅವಳು ಆತ್ಮಹತ್ಯೆ ಮಾಡಿಕೊಂಡರೆ ಅವಳ ಹೆಸರಲ್ಲಿರುವ ಇನ್ಸೂರೆನ್ಸ ಕ್ಲೇಮ್ ಆಗಲಿದೆ ಎಂಬ ಲೆಕ್ಕಾಚಾರ ಕೇಳಿ ಬಂದಿದೆ. ಇದೊಂದು ಭಯಾನಕ ಸಂಗತಿ ಎಂದರು.
ಜಿಲ್ಲಾಡಳಿತ ಹಾಗೂ ಆಯಾ ಸ್ಥಳೀಯ ಪೊಲೀಸ್ ಅಧಿಕಾರಿಗಳು ಮಹಿಳೆಯರಿಗೆ ರಕ್ಷಣೆ ನೀಡಬೇಕು. ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಬೇಕು. ಮಹಿಳೆಯರು ಸಹ ದೂರು ಕೊಡಲು ಹಿಂಜರಿಯಬಾರದು. ಪೊಲೀಸರು ದೂರು ತೆಗೆದುಕೊಳ್ಳದೇ ಇದ್ದ ಪಕ್ಷದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಇಲ್ಲವೇ ಜಿಲ್ಲಾಧಿಕಾರಿಗೆ ದೂರು ನೀಡಬೇಕೆಂದು ತಿಳಿಸಿದರು.
ರಾಜ್ಯಾದ್ಯಂತ ಎಷ್ಟು ಫೈನಾನ್ಸ್‌ಗಳಿವೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕುವ ಕೆಲಸ ಸರ್ಕಾರ ಮಾಡಬೇಕು. ಮಹಿಳಾ ಆಯೋಗಕ್ಕೆ ಇತಿಮಿತಿಗಳಿವೆ. ಸೀಮಿತ ಅಧಿಕಾರವಿದೆ. ಹೀಗಾಗಿ ಎಷ್ಟು ಫೈನಾನ್ಸ್‌ಗಳಿವೆ, ಸಾಲ ನೀಡಿದ ಪ್ರಮಾಣವೆಷ್ಟು, ಬಾಧಿತರು ಎಷ್ಟು ಜನ? ಎಂಬಿತ್ಯಾದಿ ಮಾಹಿತಿ ಕಲೆ ಹಾಕುವುದು ಕಷ್ಟ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಗ್ರಾಮೀಣ ಮಹಿಳೆಯರ ಸ್ಥಿತಿಗತಿ ಚಿಂತಾಜನಕವಾಗಿದೆ. ಸಾಕಷ್ಟು ಹಳ್ಳಿಗಳಿಗೆ ಭೇಟಿ ನೀಡಿದ್ದು, ಮೂಲ ಸೌಕರ್ಯದ ಕೊರತೆ ಕಾಣಿಸಿದೆ. ಶಾಲೆಗಳಲ್ಲೂ ಸುರಕ್ಷತೆ ಇಲ್ಲ. ಸರ್ಕಾರಿ ಶಾಲೆಯ ಹೆಣ್ಣು ಮಕ್ಕಳು ಹಲವು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರಿ ಶಾಲೆ ಆವರಣದಲ್ಲಿಯೇ ಮಲ-ಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡು ಬಂದಿದೆ. ಮುದ್ದೇಬಿಹಾಳ ಹಾಗೂ ಐನಾಪುರ ಸರ್ಕಾರಿ ಶಾಲೆಯಲ್ಲಿ ಅವ್ಯವಸ್ಥೆ ಕಂಡು ಬಂದಿದೆ. ಹೀಗಾಗಿ ಮೂಲ ಸೌಕರ್ಯ ಕಲ್ಪಿಸುವುದ ಜೊತೆಗೆ ಮಹಿಳೆಯರ ರಕ್ಷಣೆಗಾಗಿ ಶಕ್ತಿಯಾಗಿ ನಿಂತುಕೊಳ್ಳುವ ಕೆಲಸ ಆಯೋಗ ಮಾಡುತ್ತಿದೆ ಎಂದರು.
ಇನ್ನು ಬಾಣಂತಿಯರ ಸರಣಿ ಸಾವಿನ ವರದಿಗೆ ಸಂಬಂಧಿಸಿದಂತೆ ಸಂಪೂರ್ಣ ವರದಿ ಸರ್ಕಾರಕ್ಕೆ ಒಪ್ಪಿಸಲಾಗಿದೆ. ಬಾಣಂತಿಯರ ಸಾವಿಗೆ ಕಾರಣಗಳು ಹಲವು. ಹೀಗಾಗಿ ಎಲ್ಲವನ್ನೂ ಅಧ್ಯಯನ ಮಾಡಿ ವರದಿ ನೀಡಲು ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು. ವರದಿ ಸಲ್ಲಿಕೆಯಾಗಿದೆ ಎಂದರು.