ತಾಲ್ಲೂಕು ಸುಧಾರಣಾ ಬದಲಾಗಿ ವಿಧಾಸಭಾ ಕ್ಷೇತ್ರದ ಮಟ್ಟದಲ್ಲಿ ಶಿಕ್ಷಣ ಸುಧಾರಣಾ ಸಮಿತಿ ರಚನೆ

Madhu Bangarappa
ಮಧು ಬಂಗಾರಪ್ಪ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ.
Published on

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯು ಕಳೆದ ಜನವರಿಯಲ್ಲಿ ರಚಿಸಿದ್ದ ‘ತಾಲ್ಲೂಕು ಮಟ್ಟದ ಶಿಕ್ಷಣ ಸುಧಾರಣಾ ಸಮಿತಿ’ಗೆ ಬದಲಾಗಿ ‘ವಿಧಾನಸಭಾ ಮತಕ್ಷೇತ್ರದ ಮಟ್ಟದಲ್ಲಿ ಶಿಕ್ಷಣ ಸುಧಾರಣಾ ಸಮಿತಿ’ ರಚನೆ ಮಾಡಿದೆ.

ಈ ಸಂಬಂಧ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಸಕರನ್ನು ಸಂಪರ್ಕಿಸಿ ಅವರ ಅಧ್ಯಕ್ಷತೆಯಲ್ಲಿ ಸಮಿತಿಗಳನ್ನು ರಚಿಸಬೇಕು. ಜಿಲ್ಲಾ ಉಪ ನಿರ್ದೇಶಕರು ಜಿಲ್ಲಾಉಸ್ತುವಾರಿ ಸಚಿವರ ಅನುಮೋದನೆ ಪಡೆದು ಮಾ.10ರೊಳಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಿಗೆ ವರದಿ ನೀಡುವಂತೆ ಶಾಲಾ ಶಿಕ್ಷಣ ಆಯುಕ್ತರು ಸೂಚನೆ ನೀಡಿದ್ದಾರೆ.

ಡಿಡಿಪಿಐ ಮತ್ತು ಬಿಇಒಗಳಸಭೆಯಲ್ಲಿ ಸಲಹೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಮಿತಿ ವ್ಯಾಪ್ತಿ ವಿಸ್ತರಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ತಾಲ್ಲೂಕು ಮಟ್ಟದಿಂದ ವಿಧಾನಸಭಾ ವ್ಯಾಪ್ತಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಅನುಮತಿ ಪಡೆಯುವುದು ಸೇರಿ ಇಡೀ ಪ್ರಕ್ರಿಯೆ ರಾಜಕೀಯ ಚಟುವಟಿಕೆಗಳ ತಾಣವಾಗಲಿವೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಅನಿವಾರ್ಯವಾಗಿ ಜನಪ್ರತಿನಿಧಿಗಳ ಸಂಪರ್ಕಕ್ಕೆ ಸಿಲುಕಬೇಕಿದೆ ಎಂದು ಶಿಕ್ಷಣ ತಜ್ಞರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜನವರಿಯಲ್ಲಿ ರಚಿಸಿದ್ದ ಸುಧಾರಣಾ ಸಮಿತಿ:

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ಶಾಲಾ ಶಿಕ್ಷಣ ಇಲಾಖೆಯು ‘ತಾಲ್ಲೂಕು ಮಟ್ಟದಲ್ಲಿ ಶಿಕ್ಷಣ ಸುಧಾರಣಾ ಸಮಿತಿ’ಯನ್ನು ಕಳೆದ ಜ.22ರಂದು ರಚನೆ ಮಾಡಲಾಗಿತ್ತು. ಎಲ್ಲ ತಾಲೂಕುಗಳಲ್ಲಿ ಈ ಸಮಿತಿಯನ್ನು ರಚಿಸಲು ಆಯಾ ತಾಲ್ಲೂಕು ಒಳಪಡುವ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ಸಂಪರ್ಕಿಸಿ ವರದಿ ಮಾಡಲು ತಿಳಿಸಲಾಗಿತ್ತು.

ತಾಲ್ಲೂಕು ಮಟ್ಟದಲ್ಲಿ ಬೇರೆ ಬೇರೆ ಇಲಾಖೆಗಳ ಕುರಿತು ಶಾಸಕರ ಅಧ್ಯಕ್ಷೆಯಲ್ಲಿ ಸಮಿತಿ ಇರುವ ರೀತಿಯಲ್ಲೇ ಶಾಲಾ ಶಿಕ್ಷಣ ಇಲಾಖೆ ಸಹ ಸಮಿತಿ ರಚಿಸಬೇಕೆಂದು ಈ ಸಮಿತಿ ರಚನೆ ಕ್ರಮಕ್ಕೆ ಮುಂದಾಗಿತ್ತು.

ಈ ಸಮಿತಿಯಲ್ಲಿ ಶಾಸಕರು ಸಮಿತಿಯ ಅಧ್ಯಕ್ಷರಾಗಿದ್ದು, ತಹಶೀಲ್ದಾರ್, ಸಿಇಒ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೇರಿ ಒಟ್ಟಾರೆ 14 ಮಂದಿ ಇರಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net