ಸರ್ಕಾರದ ವಿರುದ್ಧ ಪಾದಯಾತ್ರೆ ನಿರ್ವಹಣೆಗೆ ತಂಡ ರಚನೆ

bsy
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ವಾಲ್ಮೀಕಿ ನಿಗಮ, ಮುಡಾ ಹಗರಣಗಳ ಸತ್ಯಾಂಶವನ್ನು ಜನರಿಗೆ ತಿಳಿಸಲು ಹಾಗೂ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಆ.3ರಿಂದ 10ರವರೆಗೆ ನಡೆಯುವ ‘ಮೈಸೂರು ಚಲೋ’ ಪಾದಯಾತ್ರೆ ನಿರ್ವಹಣೆಗೆ ಬಿಜೆಪಿ ಏಳು ತಂಡಗಳನ್ನು ರಚಿಸಿದೆ.

ಅರಮನೆ ಮೈದಾನದಲ್ಲಿ ಸೋಮವಾರ ನಡೆದ ಪೂರ್ವ ತಯಾರಿ ಸಭೆಯಲ್ಲಿ ನಡಿಗೆಯ ರೂಪರೇಷೆ ಅಂತಿಮಗೊಳಿಸಲಾಯಿತು. ಚಾಮರಾಜನಗರ, ಮೈಸೂರು ಹಾಗೂ ಕೊಡಗು ಹೊರತುಪಡಿಸಿ, 36 ಸಂಘಟನಾತ್ಮಕ ಜಿಲ್ಲೆಗಳ ಪ್ರಮುಖರನ್ನು ಸೇರಿದ ಏಳು ತಂಡಗಳಿಗೆ ಜವಾಬ್ದಾರಿ ಹಂಚಿಕೆಯಾಗಿದೆ. ನಂತರ ಏಳು ತಂಡಗಳ ಪ್ರಮುಖರೊಂದಿಗೆ ಪ್ರತ್ಯೇಕವಾಗಿ ಸಮಾಲೋಚಿಸಿ, ನಿರ್ವಹಿಸಬೇಕಾದ ವ್ಯಾಪ್ತಿ, ಮಿತಿ ಮತ್ತಿತರ ಅಂಶಗಳ ಬಗ್ಗೆ ರ್ಚಚಿಸಿದ ತಂಡದ ಪಾತ್ರವೇನೆಂದು ಸ್ಪಷ್ಟಪಡಿಸಿಕೊಂಡಿದ್ದಾರೆ.

ಕೆಂಗೇರಿ ಬಳಿ ಚಾಲನೆ: ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ. ಪಾದಯಾತ್ರೆ ಯಶಸ್ವಿಗೊಳಿಸಲು ಪ್ರಮುಖರ ತಂಡ ಹಾಗೂ ಬಿಜೆಪಿ- ಜೆಡಿಎಸ್ ಮುಖಂಡರ ಸಮನ್ವಯ ಸಮಿತಿಗಳನ್ನು ರಚಿಸಲಿದ್ದೇವೆ.

ಆ.3ರ ಬೆಳಗ್ಗೆ 8.30ಕ್ಕೆ ಕೆಂಗೇರಿ ಬಳಿಯ ಕೆಂಪಮ್ಮ ಹಾಗೂ ಗಣಪತಿ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸುತ್ತೇವೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಪ್ರಲ್ಹಾದ ಜೋಶಿ ಸೇರಿ ಉಭಯ ಪಕ್ಷಗಳ ಹಿರಿಯ ನಾಯಕರ ನೇತೃತ್ವದಲ್ಲಿ ಚಾಲನೆ ಪಡೆಯಲಿದೆ ಎಂದರು.

ಪಕ್ಷದ ಕಾರ್ಯಕರ್ತ: ನಾನು ನಾಯಕನೆಂದು ಹೇಳಿಕೊಂಡಿಲ್ಲ, ಪಕ್ಷದ ಕಾರ್ಯಕರ್ತನಷ್ಟೇ. ವರಿಷ್ಠರ ಸೂಚನೆ ಪಾಲಿಸುವುದಷ್ಟೇ ನನ್ನ ಜವಾಬ್ದಾರಿ ಎಂದು ಶಾಸಕ ರಮೇಶ್ ಜಾರಕಿಹೊಳಿಗೆ ಕುಟುಕಿದರು.

ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ವಿಜಯೇಂದ್ರ ಅವರನ್ನು ಒಪ್ಪಿಕೊಂಡಿಲ್ಲ ಎಂಬ ಜಾರಕಿಹೊಳಿ ಹೇಳಿಕೆಗೆ ಪ್ರಾಮುಖ್ಯತೆ ನೀಡಬೇಕಾದ ಅಗತ್ಯವಿಲ್ಲ. ವಾಲ್ಮೀಕಿ ಹಗರಣದ ವಿರುದ್ಧ ಕೆಲವರು ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿದರೆ ಪಕ್ಷದ ಶಕ್ತಿ ಇನ್ನಷ್ಟು ಹೆಚ್ಚಾಗಲಿದೆ ಎಂದರು.

ಅರವಿಂದ ಲಿಂಬಾವಳಿ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರದ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಇದ್ಯಾವುದೂ ಕಾಟಾಚಾರಕ್ಕಲ್ಲ ಎಂದರು.

ಮೊದಲ ದಿನದ ನೇತೃತ್ವ: ಮೊದಲ ದಿನ ದಾಸರಹಳ್ಳಿ ಶಾಸಕ ಮುನಿರಾಜು ನೇತೃತ್ವವಹಿಸಲಿದ್ದು, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್​ರೆಡ್ಡಿ ಜತೆಗಿರುತ್ತಾರೆ. ಯಶವಂತಪುರ, ದಾಸರಹಳ್ಳಿ, ಆರ್​ಆರ್​ನಗರ, ವಿಜಯನಗರ, ಶಿವಾಜಿನಗರ, ದೊಡ್ಡಬಳ್ಳಾಪುರ, ಮಾಗಡಿ, ಪದ್ಮನಾಭನಗರ, ರಾಜಾಜಿನಗರ ಜನಪ್ರತಿನಿಧಿಗಳು, ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಕಾಂಗ್ರೆಸ್​ಗೆ ಭಯವೇಕೆ?: ಕೋವಿಡ್ ಸಂದರ್ಭದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಕಾಂಗ್ರೆಸ್ ಪಾದಯಾತ್ರೆಗೆ ಅನುಮತಿ ಕೊಟ್ಟಿದ್ದಿಲ್ಲ. ಈಗ ಪಾದಯಾತ್ರೆಗೆ ಅನುಮತಿ ನಿರಾಕರಿಸಲು ಕಾರಣವಿಲ್ಲ. ಹೋರಾಟದ ಬಗ್ಗೆ ಕಾಂಗ್ರೆಸ್​ಗೆ ಭಯವೇಕೆ? ಎಂದು ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು. ವಾಲ್ಮೀಕಿ, ಮುಡಾ ಅಕ್ರಮದ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಸದನದ ಒಳಗೆ, ಹೊರಗೆ ಹೇಗೆ ವರ್ತಿಸಿದ್ದಾರೆ ಎಂದು ಜನ ಗಮನಿಸಿದ್ದಾರೆ. ಜಂಟಿ ಪಾದಯಾತ್ರೆ ನಿಜಬಣ್ಣ ಬಯಲುಗೊಳಿಸಲಿದೆ ಎಂಬ ಕಾರಣಕ್ಕೆ ದಿಗಿಲು ಉಂಟಾದಂತಿದೆ ಎಂದು ಟೀಕಿಸಿದರು.

ಪ್ರತಿದಿನ 20 ಕಿ.ಮೀ. ನಡಿಗೆ: ಪ್ರತಿದಿನ ಬೆಳಗ್ಗೆ 10, ಮಧ್ಯಾಹ್ನ ಊಟದ ನಂತರ 10 ಕಿ.ಮೀ. ಕ್ರಮಿಸಲಿದ್ದೇವೆ. ಪ್ರತಿದಿನ 8-10 ವಿಧಾನಸಭೆ ಕ್ಷೇತ್ರಗಳ ಮುಖಂಡರು, ಕಾರ್ಯಕರ್ತರು ಭಾಗಿಯಾಗುವರು. ಪ್ರತಿ ಜಿಲ್ಲೆಯಿಂದ ಕನಿಷ್ಠ 200 ಜನ ಬರಲಿದ್ದು, ಏಳು ದಿನವೂ ಇರಲಿದ್ದಾರೆ. ವಸತಿ, ಉಪಾಹಾರ, ಊಟದ ವ್ಯವಸ್ಥೆಯನ್ನು ತಂಡಗಳು ನೋಡಿಕೊಳ್ಳಲಿವೆ. ರಾಜ್ಯದ 224 ವಿಧಾನಸಭೆ ಕ್ಷೇತ್ರಗಳ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಆ.10ರಂದು ಮೈಸೂರಿನಲ್ಲಿ ಸಮಾರೋಪ ನಡೆಯಲಿದ್ದು, ಕೇಂದ್ರ ನಾಯಕರು ಬರಲಿದ್ದಾರೆ. 50 ರಿಂದ 60 ಸಾವಿರ ಜನ ಸೇರುವ ನಿರೀಕ್ಷೆಯಿದೆ ಎಂದು ಬಿ.ವೈ.ವಿಜಯೇಂದ್ರ ವಿವರಿಸಿದರು.

ಬಿಜೆಪಿಯಿಂದ ನೆರೆ ಅಧ್ಯಯನ

ಬೆಂಗಳೂರು: ರಾಜ್ಯದ ಪ್ರವಾಹ ಬಾಧಿತ ಪ್ರದೇಶದ ವಸ್ತುಸ್ಥಿತಿ ಅಧ್ಯಯನ, ಸರ್ಕಾರ ಕೈಗೊಂಡ ಕ್ರಮಗಳ ಪರಿಶೀಲನೆಗಾಗಿ ಬಿಜೆಪಿಯ ಆರು ತಂಡಗಳು ಅಧ್ಯಯನ ಪ್ರವಾಸ ಕೈಗೊಳ್ಳಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೋಮವಾರ ಪ್ರಕಟಿಸಿದರು. ಅರಮನೆ ಮೈದಾನದ ವೈಟ್ ಪೆಟಲ್ಸ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಮೈಸೂರು ಪಾದಯಾತ್ರೆ ಪೂರ್ವ ತಯಾರಿ ಸಭೆಯಲ್ಲಿ ಈ ವಿಷಯ ತಿಳಿಸಿದರು. ಪ್ರತಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣ ಸ್ವಾಮಿ, ಸಂಸದರು, ಶಾಸಕರು, ಪಕ್ಷದ ಪದಾಧಿಕಾರಿಗಳು, ಜಿಲ್ಲಾ ಘಟಕಗಳ ಅಧ್ಯಕ್ಷರನ್ನು ಒಳಗೊಂಡ ತಂಡಗಳು ಮಳೆ ಹಾಗೂ ಪ್ರವಾಹ ಬಾಧಿತ ಪ್ರದೇಶದ ಸ್ಥಿತಿಗತಿ ವೀಕ್ಷಿಸಲಿದೆ ಎಂದರು. ಆರು ತಂಡಗಳು ಮಂಗಳವಾರದಿಂದ ಗುರುವಾರದ ಪ್ರವಾಸ ಕೈಗೊಳ್ಳಲಿವೆ.

ಯಾರ ನೇತೃತ್ವದ ತಂಡ ಎಲ್ಲಿಗೆ ಭೇಟಿ ?:

ತಂಡ-1: ಆರ್.ಅಶೋಕ್- ಮಂಗಳೂರು, ಬೆಳಗಾವಿ. ತಂಡ-2: ಆರಗ ಜ್ಞಾನೇಂದ್ರ- ಶಿವಮೊಗ್ಗ, ತಂಡ-3: ಡಾ.ಸಿ.ಎನ್.ಅಶ್ವತ್ಥ ನಾರಾಯಣ- ಕೊಡಗು, ಉಡುಪಿ, ತಂಡ-4: ಛಲವಾದಿ ನಾರಾಯಣಸ್ವಾಮಿ- ರಾಯಚೂರು, ಯಾದಗಿರಿ, ತಂಡ-5: ಅರವಿಂದ ಬೆಲ್ಲದ್- ಬಾಗಲಕೋಟೆ, ವಿಜಯಪುರ ಹಾಗೂ ತಂಡ-6: ಬಿ.ಶ್ರೀರಾಮುಲು- ಕೊಪ್ಪಳ, ಬಳ್ಳಾರಿ, ವಿಜಯನಗರ.

ಮಲೆನಾಡು, ಪಶ್ಚಿಮಘಟ್ಟದ ಭಾರಿ ಮಳೆ ಹಾಗೂ ನೆರೆಯ ಮಹಾರಾಷ್ಟ್ರ, ಕೇರಳದಲ್ಲಿ ಭರಪೂರ ಮಳೆಯಿಂದ ಅನೇಕ ನದಿಗಳು ಉಕ್ಕಿ ಹರಿಯುತ್ತಿವೆ. ರಾಜ್ಯದ 12 ಜಿಲ್ಲೆಗಳು ಪ್ರವಾಹ ಬಾಧಿತವಾಗಿ ಸಾವು-ನೋವು, ಕಷ್ಟ-ನಷ್ಟಗಳನ್ನು ಜನರು ಅನುಭವಿಸುತ್ತಿದ್ದಾರೆ. ಕಾವೇರಿ, ಕೃಷ್ಣಾ, ವರದಾ, ಘಟಪ್ರಭಾ, ಮಲಪ್ರಭಾ, ಗಂಗಾವಳಿ, ದೂದಗಂಗಾ, ವೇದಗಂಗಾ, ತುಂಗಭದ್ರಾ ಮತ್ತಿತರ ನದಿಗಳು ಅಪಾಯದಮಟ್ಟ ಮೀರಿ ಹರಿಯುತ್ತಿವೆ. ನದಿಗಳ ಸಮೀಪದ ಗ್ರಾಮಗಳು ಜಲಾವೃತ, ಪಟ್ಟಣಗಳಿಗೆ ನೀರು ನುಗ್ಗಿದೆ. ತಗ್ಗುಪ್ರದೇಶದ ಮನೆಗಳು ಜಲಾವೃತವಾದ ವರದಿಗಳು ಲಭ್ಯವಾಗಿದ್ದು, ಈ ತಂಡಗಳು ಸಾಧ್ಯವಾದಷ್ಟು ಹೆಚ್ಚಿನ ಪ್ರದೇಶಕ್ಕೆ ಭೇಟಿ ನೀಡಲಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net