ಗ್ರಾಪಂ ಸದಸ್ಯರು, ನೌಕರರ ಬೇಡಿಕೆ ಈಡೇರಿಕೆಗೆ ಸಮಿತಿ ರಚಿಸಿ; ಗೂಳಿಗೌಡ ಪತ್ರ

dinesh
Published on

ಬೆಂಗಳೂರು: ಗ್ರಾಪಂ ಸದಸ್ಯರು, ನೌಕರರ ಬೇಡಿಕೆ ಅಧ್ಯಯನಕ್ಕೆ ತಜ್ಞರ ಮತ್ತು ಜನಪ್ರತಿನಿಧಿಗಳ ಹಾಗೂ ಪದಾಧಿಕಾರಿಗಳ ತಂಡ ರಚಿಸುವಂತೆ ಮುಖ್ಯಮಂತ್ರಿ ಹಾಗೂ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಿಗೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.
ಈ ಸಂಬಂಧ ಪತ್ರ ಬರೆದಿರುವ ಗೂಳಿಗೌಡ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕಳೆದ ನಾಲ್ಕು ದಿನಗಳಿಂದ ತಮ್ಮ ಕರ್ತವ್ಯ ಬಹಿಷ್ಕರಿಸಿ ಅನಿರ್ಧಿಷ್ಟ ಮುಷ್ಕರ ನಡೆಸುತ್ತಿದ್ದು, ಅವರ ಬೇಡಿಕೆ ಈಡೇರಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಗಮನ ಸೆಳೆದಿದ್ದಾರೆ.
ಗ್ರಾಮ ಪಂಚಾಯತ್ ಪಿಡಿಒ ಹಾಗೂ ಇತರ ಅಧಿಕಾರಿಗಳ ಜವಾಬ್ದಾರಿ ನಕ್ಷೆಯನ್ನು ಸಿದ್ಧ ಮಾಡಬೇಕು ಎಂಬುದು ಗ್ರಾಮ ಪಂಚಾಯತ್ ಜನಪ್ರತಿನಿಧಿಗಳ ಪ್ರಮುಖ ಬೇಡಿಕೆಯಾಗಿದೆ. ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಸದಸ್ಯರನ್ನು ರಾಜ್ಯ ಶಿಷ್ಟಾಚಾರ ವ್ಯಾಪ್ತಿಗೆ ತರಬೇಕು. ಮಾಸಿಕ ಗೌರವಧನ ಹೆಚ್ಚಿಸಬೇಕು, ಆರೋಗ್ಯ ವಿಮೆ, ಉಚಿತ ಬಸ್ ಪಾಸ್ ಮುಂತಾದವನ್ನು ಒದಗಿಸಬೇಕು ಎಂದು ಮನವಿ ಮಾಡುತ್ತಿದ್ದಾರೆ.
ಗ್ರಾಮ ಪಂಚಾಯತ್‌ಗಳಲ್ಲಿ ನಡೆಯುವ ಪ್ರಗತಿ ಪರಿಶೀಲನಾ ಕೆಡಿಪಿ ಸಭೆಗಳಿಗೆ ವಿವಿಧ ಇಲಾಖೆ ಅಧಿಕಾರಿಗಳು ಇತೆರೆ ಸಿಬ್ಬಂದಿಗಳನ್ನೆಲ್ಲ ಕಳಿಸುತ್ತಿದ್ದಾರೆ. ಇದರಿಂದ ಪಿಡಿಒ ವೃಂದವನ್ನು ಬಿ ದರ್ಜೆಗೆ ಉನ್ನತೀಕರಿಸಿ, ಕೆಡಿಪಿ ಸಭೆಗಳನ್ನು ಶಾಸನಬದ್ಧಗೊಳಿಸಬೇಕು ಎಂದು ಜನಪ್ರತಿನಿಧಿಗಳು ಒತ್ತಾಯಿಸುತ್ತಿದ್ದಾರೆ. ಒಟ್ಟಾರೆ ಹತ್ತಾರು ಬೇಡಿಕೆಗಳನ್ನು ಮುಂದಿಟ್ಟಿದ್ದು, ಅವರ ಬೇಡಿಕೆಗೆ ಸ್ಪಂದಿಸುವ ನಿಟ್ಟಿನಲ್ಲಿ ಸಮಿತಿ ರಚಿಸಬೇಕೆಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net