ಸಣ್ಣ ವಯಸ್ಸಿನವರಲ್ಲಿಯೂ ಮರೆಗುಳಿತನ : ಡಾ.ಯೋಗೇಶ್ ಶಾ

 ‘ಮರೆಗುಳಿತನ: ನೀತಿ, ಅಭ್ಯಾಸಗಳು, ಪ್ರಗತಿ’ ಕುರಿತು ಎರಡು ದಿನಗಳ ಅಂತಾರರಾಷ್ಟ್ರೀಯ ಸಮ್ಮೇಳನದಲ್ಲಿ ಡಾ.ಯೋಗೇಶ್ ಶಾ, ಡಾ. ಎನ್.ಬಸವನಗೌಡಪ್ಪ,  ಡಾ.ಹನುಮಂತಚಾರ್ ಜೋಶಿ ರೇಣು ವೋಹ್ರಾ , ಡಾ.ಸಿ.ಪಿ.ಮಧು,  ಡಾ.ಪ್ರತಿಭಾ ಪೆರೇರಾ ಇದ್ದರು.
‘ಮರೆಗುಳಿತನ: ನೀತಿ, ಅಭ್ಯಾಸಗಳು, ಪ್ರಗತಿ’ ಕುರಿತು ಎರಡು ದಿನಗಳ ಅಂತಾರರಾಷ್ಟ್ರೀಯ ಸಮ್ಮೇಳನದಲ್ಲಿ ಡಾ.ಯೋಗೇಶ್ ಶಾ, ಡಾ. ಎನ್.ಬಸವನಗೌಡಪ್ಪ, ಡಾ.ಹನುಮಂತಚಾರ್ ಜೋಶಿ ರೇಣು ವೋಹ್ರಾ , ಡಾ.ಸಿ.ಪಿ.ಮಧು, ಡಾ.ಪ್ರತಿಭಾ ಪೆರೇರಾ ಇದ್ದರು.
Published on
ಮೈಸೂರು: ಇತ್ತೀಚಿನ ವರ್ಷಗಳಲ್ಲಿ ಸಣ್ಣ ವಯಸ್ಸಿನವರಲ್ಲಿಯೂ ಮರೆಗುಳಿತನ ಕಾಯಿಲೆ ಕಾಣಿಸಿಕೊಳ್ಳುತ್ತಿದೆ ಎಂದು ಯುಎಸ್‌ಎ ಡೆಸ್‌ಮೋನಿಸ್‌ನ ಬ್ರಾಡ್‌ಲಾನ್ಸ್ ಮೆಮೊರಿ ಸೆಂಟರ್‌ನ ವೈದ್ಯಕೀಯ ನಿರ್ದೇಶಕ  ಡಾ.ಯೋಗೇಶ್ ಶಾ ಹೇಳಿದರು.
ಬನ್ನಿಮಂಟಪದ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಎಆರ್‌ಡಿಎಸ್‌ಐ ಮೈಸೂರು ಚಾಪ್ಟರ್, ಜೆಎಸ್‌ಎಸ್ ಆಸ್ಪತ್ರೆಯ ಜಿರಿಯಾಟಿಕ್ಸ್ ವಿಭಾಗ ಹಾಗೂ ಶಾರದಾ ವಿಲಾಸ ಫಾರ್ಮಸಿ ಕಾಲೇಜು ವತಿಯಿಂದ ಆಯೋಜಿಸಿರುವ ‘ಮರೆಗುಳಿತನ: ನೀತಿ, ಅಭ್ಯಾಸಗಳು, ಪ್ರಗತಿ’ ಕುರಿತು ಎರಡು ದಿನಗಳ ಅಂತಾರರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ಮನುಷ್ಯರಲ್ಲಿ 60 ವರ್ಷವಾದ ಮೇಲೆ ಮರೆಗುಳಿ ಕಾಯಿಲೆ ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ಬಹಳ ಬೇಗನೆ ಕಾಣಿಸಿಕೊಳ್ಳುತ್ತಿದೆ. ಸಂಶೋಧನೆಯಲ್ಲಿ 40 ವರ್ಷ ದಾಟಿದವರಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ಮರೆಗುಳಿತನ ಕಾಯಿಲೆ ಕಾಣಿಸಿಕೊಳ್ಳ ತೊಡಗಿದೆ. ಮರೆಗುಳಿತನಕ್ಕೆ ಕಾರಣವಾಗಿರುವ ಅಂಶಗಳನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ನೂತನ ತಂತ್ರಜ್ಞಾನಗಳ ಸಹಾಯಕದಿಂದ ಪೂರಕವಾಗಿ ಸಂಶೋಧನೆಗಳು ಪ್ರಗತಿಯಲ್ಲಿದೆ ಎಂದು ಹೇಳಿದರು. 
ಮರೆಗುಳಿ ಕಾಯಿಲೆಯೂ ಕಾಣಿಸಿಕೊಳ್ಳುವುದನ್ನು ಮೊದಲೇ ಗುರುತಿಸುವುದರಿಂದ ಅದನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಕಾಯಿಲೆಯ ಉಪಶಮನಕ್ಕೆ ಅಗತ್ಯವಾದ ಔಷಧಗಳ ಸಂಮಿಶ್ರಣವೂ ಲಭ್ಯವಿರುವುದರಿಂದ ಅವುಗಳನ್ನು ಬಳಕೆ ಮಾಡಿಕೊಳ್ಳಬಹುದಾದ ಅವಕಾಶಗಳನ್ನು ಕುರಿತು ಇಂತಹ ಸಮ್ಮೇಳನಗಳು ಬೆಳಕು ಚೆಲ್ಲುತ್ತವೆ ಎಂದರು.
ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಪತಿ ಡಾ. ಎನ್.ಬಸವನಗೌಡಪ್ಪ ಮಾತನಾಡಿ, ಮರೆಗುಳಿ ಕಾಯಿಲೆಯನ್ನು ಗುರುತಿಸಲು ಹತ್ತಾರು ಪ್ಯಾರಮೀಟರ್‌ಗಳು ಈಗಾಗಲೇ ಬಳಕೆಯಲ್ಲಿವೆ. ನೂತನ ತಂತ್ರಜ್ಞಾನ ಬಳಕೆ ಮಾಡಿಕೊಂಡು ಮಿದುಳು, ನರಮಂಡಲವನ್ನು ಬಹಳ ಆಳವಾಗಿ ವಿಶ್ಲೇಷಣೆಗೆ ಒಳಪಡಿಸುವ ಸ್ಕ್ಯಾನಿಂಗ್ ಸೌಲಭ್ಯಗಳು ಲಭ್ಯವಿರುವುದರಿಂದ  ವೈದ್ಯರು ಪರಿಣಾಮಕಾರಿ ಚಿಕಿತ್ಸೆಯನ್ನು ನೀಡಬಹುದಾಗಿದೆ ಎಂದರು.
ಶಾರದಾ ವಿಲಾಸ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಹನುಮಂತಚಾರ್ ಜೋಶಿ ಮಾತನಾಡಿ, ಪ್ರಪಂಚದ ಅಭಿವೃದ್ಧಿಶೀಲ ದೇಶಗಳಲ್ಲಿ ಮರೆಗುಳಿತನವಿರುವವರು ಪ್ರಮಾಣ ಹೆಚ್ಚಾಗುತ್ತಿದೆ. ಪ್ರಸ್ತುತ ಶೇ.60ರಷ್ಟು ಜನ ಈ ಕಾಯಿಲೆಗಳಿಂದ ಬಳಲುತ್ತಿದ್ದಾರೆ. 2040ರ ಹೊತ್ತಿಗೆ ಈ ಪ್ರಮಾಣವು ಶೇ.71ಕ್ಕೆ ಏರಿಕೆಯಾಗುತ್ತದೆ ಎಂದು ಅಂದಾಜು ಇದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ವೈದ್ಯಕೀಯ ತಪಾಸಣೆಗೆ ಒಳಗಾಗುವುದು ಉತ್ತಮ  ಎಂದರು.
ಎಆರ್‌ಡಿಎಸ್‌ಐ ಅಧ್ಯಕ್ಷ ರೇಣು ವೋಹ್ರಾ ಅಧ್ಯಕ್ಷತೆಯನ್ನು ವಹಿಸಿದ್ದರು. ಜೆಎಸ್‌ಎಸ್ ಆಸ್ಪತ್ರೆ ನಿರ್ದೇಶಕ ಡಾ.ಸಿ.ಪಿ.ಮಧು, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಪ್ರತಿಭಾ ಪೆರೇರಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net