ಬಾಲಾಕೋಟ್ ವಿಜಯದ ವರ್ಷಾಚರಣೆ: ಮಿಗ್-21 ಹಾರಿಸಿದ ವಾಯುಪಡೆ ಮುಖ್ಯಸ್ಥ ಆರ್​ಕೆಎಸ್ ಭದೌರಿಯಾ

Balakot
Published on

ಶ್ರೀನಗರ: ಪಾಕಿಸ್ತಾನದ ಬಾಲಾಕೋಟ್ ಮೇಲೆ ನಡೆಸಿದ ವೈಮಾನಿಕ ದಾಳಿಯ ವಿಜಯದ ಮೊದಲ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ವಾಯುಪಡೆ ಮುಖ್ಯಸ್ಥ ಏರ್​ಚೀಫ್ ಮಾರ್ಷಲ್ ಆರ್​ಕೆಎಸ್ ಭದೌರಿಯಾ ಬುಧವಾರ ಶ್ರೀನಗರ ವಾಯುನೆಲೆಯಲ್ಲಿ ಮಿಗ್-21 ಯುದ್ಧ ವಿಮಾನ ಹಾರಿಸಿದರು. ಬಧೌರಿಯಾಜತೆಗೆ ಗ್ರೂಪ್ ಕ್ಯಾಪ್ಟನ್ ನಜೀರ್ ನೇತೃತ್ವದಲ್ಲಿ ಎರಡು ಸುಖೋಯ್-30 ಎಂಕೆಐ ಮತ್ತು ಎರಡು ಮಿರಾಜ್-2000 ಯುದ್ಧವಿಮಾನಗಳು ಹಾರಾಟದಲ್ಲಿ ಭಾಗಿಯಾಗಿದ್ದವು.

ಕಳೆದ ವರ್ಷ ಬಾಲಾಕೋಟ್ ಮೇಲೆ ದಾಳಿ ನಡೆದ ಬಳಿಕ ಭಾರತದ ಗಡಿಯೊಳಗೆ ನುಸುಳಿದ್ದ ಪಾಕ್ ವಿಮಾನಗಳನ್ನು ಹಿಮ್ಮೆಟ್ಟಿಸಲು 51ನೇ ಸ್ಕಾ್ವಡ್ರನ್​ನ ಮಿಗ್-21 ವಿಮಾನಗಳನ್ನು ಬಳಸಲಾಗಿತ್ತು. ಹೀಗಾಗಿ ವರ್ಷಾಚರಣೆಯ ಸಂದರ್ಭದಲ್ಲಿ ಇದೇ ಸ್ಕಾ್ವಡ್ರನ್​ನ ವಿಮಾನವನ್ನು ಬಧೌರಿಯಾ ಹಾರಾಟ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭದೌರಿಯಾ, ಬಾಲಾಕೋಟ್ ಮೇಲೆ ನಡೆದ ವೈಮಾನಿಕ ದಾಳಿ ಕಳೆದ 40 ವರ್ಷಗಳಲ್ಲಿ ವಾಯುಪಡೆ ನಡೆಸಿದ ಮಹತ್ವದ ಕಾರ್ಯಾಚರಣೆ ಆಗಿದೆ. ಈ ಏರ್​ಸ್ಟ್ರೈಕ್ ಮೂಲಕ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಲಾಗಿದೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದರೆ ನಾವೇನು ಮಾಡುತ್ತೇವೆ ಎಂಬುದು ಪಾಕ್​ಗೆ ಅರಿವಾಗಿದೆ. ಬಾಲಾಕೋಟ್​ನಲ್ಲಿ ಉಗ್ರ ಶಿಬಿರಗಳು ಮರಳಿ ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಮಾಹಿತಿ ಇದ್ದು, ಅವುಗಳ ಮೇಲೆ ಕಣ್ಣಿಟ್ಟಿದ್ದೇವೆ ಎಂದು ಹೇಳಿದರು.

ಆಪರೇಷನ್ ಬಂದರ್: ಆಪರೇಷನ್ ಬಂದರ್ ಎಂಬುದು ಬಾಲಾಕೋಟ್ ಮೇಲಿನ ದಾಳಿಯ ಕೋಡ್ ಆಗಿತ್ತು. ಈ ದಾಳಿ ಸಿದ್ಧತೆ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ (ರಾ) ಮಹತ್ವದ ಮಾಹಿತಿಯನ್ನು ನೀಡಿ ಸಹಕರಿಸಿತು ಎಂದು ನಿವೃತ್ತ ಏರ್ ಮಾರ್ಷಲ್ ಸಿ.ಹರಿ ಕುಮಾರ್ ತಿಳಿಸಿದರು.

ಭಯೋತ್ಪಾದನೆ ವಿರುದ್ಧ ಭಾರತದ ಕಾರ್ಯಾಚರಣೆಗಳಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಈಗ ನಮ್ಮ ಸೇನೆ ಶತ್ರು ರಾಷ್ಟ್ರದ ಗಡಿ ದಾಟಲು ಹಿಂಜರಿಯುವುದಿಲ್ಲ ಮತ್ತು ದೇಶದ ರಕ್ಷಣೆ ಪ್ರಶ್ನೆ ಬಂದಾಗ ಇಂತಹ ಸಾಹಸವನ್ನು ತೋರುತ್ತದೆ. | ರಾಜನಾಥ್ ಸಿಂಗ್ ರಕ್ಷಣಾ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net