2015ರ ನಂತರದ ಅರಣ್ಯ ಒತ್ತುವರಿ ತೆರವು

forest land
Published on

ಬೆಂಗಳೂರು:
2015ರ ನಂತರದ ಅರಣ್ಯ ಒತ್ತುವರಿ ತೆರವುಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ 2015ರಲ್ಲಿ ಜೀವನೋಪಾಯಕ್ಕಾಗಿ ಅರಣ್ಯ ಭೂಮಿ ಒತ್ತುವರಿ ಮಾಡಿರುವವರ ಪಟ್ಟಾಭೂಮಿ ಮತ್ತು ಒತ್ತುವರಿ ಭೂಮಿ ಎರಡೂ ಸೇರಿ 3 ಎಕರೆ ಮೀರದಿದ್ದರೆ ಅಂತಹ ಒತ್ತುವರಿ ತೆರವು ಮಾಡುವುದಿಲ್ಲ ಎಂದು ಹೇಳಿದೆ. ಸರ್ಕಾರ ಈಗಲೂ ಅದಕ್ಕೆ ಬದ್ಧವಾಗಿದೆ. ಅದೇ ರೀತಿ ಅರಣ್ಯ ಹಕ್ಕು ಕಾಯಿದೆ ಅಡಿ ಈಗಾಗಲೇ ಅರ್ಜಿ ಸಲ್ಲಿಸಿರುವರ ಯಾವುದೇ ಮನೆ, ಜಮೀನು ತೆರವು ಮಾಡುವುದಿಲ್ಲ. 2015ರ ನಂತರದ ಹೊಸ ಒತ್ತುವರಿ ವಿಚಾರದಲ್ಲಿ ಕ್ರಮ ಜರುಗಿಸಲಾಗುವುದು ಎಂದರು.

69 ಎಕರೆ ಅರಣ್ಯ ಒತ್ತುವರಿ ತೆರವು
ರಾಜ್ಯದ 10 ಜಿಲ್ಲೆಗಳ ವ್ಯಾಪ್ತಿಯ ಪಶ್ಚಿಮಘಟ್ಟ ಮತ್ತು ಇತರ ಘಟ್ಟ ಪ್ರದೇಶಗಳಲ್ಲಿನ ಒತ್ತುವರಿಯನ್ನು ತೆರವು ಮಾಡಲು ಸೂಚಿಸಲಾಗಿದೆ. 24 ಗಂಟೆಯಲ್ಲಿ ನೂತನ ಕಾರ್ಯಪಡೆ 31 ಎಕರೆ ಅರಣ್ಯ ಒತ್ತುವರಿ ತೆರವು ಮಾಡಲಾಗಿದೆ ಎಂದರು.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಹೋಬಳಿಯ ಮಾಗುಂಡಿ ಸರ್ವೆ ನಂ. 29ರಲ್ಲಿ 17 ಎಕರೆ 17 ಗುಂಟೆ, ಹಲಸೂರು ಸರ್ವೆ ನಂ. 55ರಲ್ಲಿ 13 ಎಕರೆ 38 ಗುಂಟೆ ಹಾಗೂ ತನುಡಿ ಸರ್ವೆ ನಂ. 9, 21, 22,23, 72ಮತ್ತು 97ರಲ್ಲಿ ಒಟ್ಟು 36 ಎಕರೆ ಸೇರಿ ಒಟ್ಟು 69 ಎಕರೆ ಅರಣ್ಯ ಭೂಮಿ ಒತ್ತುವರಿಯನ್ನು ತೆರವು ಮಾಡಿಸಲಾಗಿದೆ ಎಂದರು.

ಹೋಂ ಸ್ಟೇ ಸರ್ವೆ
ಕೇರಳದ ದುರಂತ, ಶಿರೂರು ಮತ್ತು ಶಿರಾಡಿಯಲ್ಲಿನ ಭೂ ಕುಸಿತ ಪ್ರಕರಣವನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಅರಣ್ಯ ಪ್ರದೇಶಗಳಲ್ಲಿ ಹೋಂಸ್ಟೇ ಮಾಡಿದ್ದರೆ ಮುಲಾಜಿಲ್ಲದೆ ತೆರವು ಮಾಡಲಾಗುವುದು ಎಂದರು.

10 ಕೋಟಿ ಸಸಿ ನೆಡುವ ಯೋಜನೆ
ಪ್ರತಿ ವರ್ಷ 10 ಕೋಟಿ ಸಸಿ ನೆಡುವ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಶೇ.5ಕ್ಕಿಂತ ಕಡಿಮೆ ಇರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸಸಿ ನೆಡಲು ಉದ್ದೇಶಿಸಲಾಗಿದೆ. ಸಸಿ ನೆಟ್ಟ ಮೇಲೆ ಶೇ.30ರಷ್ಟು ಅವಸಾನ ಕಂಡಿದ್ದರೆ, ಶೇ.70ರಷ್ಟು ಉಳಿದಿವೆ. ಈ ಬಗ್ಗೆ ಆಡಿಟ್ ವರದಿ ನೀಡಲಾಗುವುದು ಎಂದರು.

10 ಸಾವಿರ ಎಕರೆ ತೆರವು
ರಾಜ್ಯದಲ್ಲಿ 6 ಲಕ್ಷ ಎಕರೆಯಲ್ಲಿ ಸುಮಾರು 2 ಲಕ್ಷ ಎಕರೆ ಒತ್ತುವರಿ ಇರಬಹುದು ಎಂದು ಅಂದಾಜಿಸಲಾಗಿದೆ. ಅನಧಿಕೃತವಾಗಿ 10 ಸಾವಿರ ಎಕರೆ, ಅಧಿಕೃತವಾಗಿ 3 ಸಾವಿರ ಎಕರೆ ಅರಣ್ಯ ಒತ್ತುವರಿ ತೆರವು ಮಾಡಲಾಗಿದೆ. ಕೊತ್ತನೂರು ಬಳಿ 500 ಕೋಟಿ ಬೆಲೆಯ 17 ಎಕರೆ ತೆರವಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net