ಪರಿಸರ ಸಮತೋಲನ ಕಾಪಾಡಲು ಅರಣ್ಯ ಸಂಪತ್ತು ಅವಶ್ಯ

doddamma
ಇಂದೋರ್‌ನ ಡಾ. ಶಂಕರ್ ಲಾಲ್ ಗಾರ್ಗ್ ಅವರಿಗೆ ಶಿವಮೊಗ್ಗದ ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್‌ನಿಂದ ದೊಡ್ಡಮ್ಮ ದೇವಿ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಾಯಿತು. ಮಾತಾ ಚೈತನ್ಯಮಯಿ, ಸಿದ್ದಪ್ಪಾಜಿ, ಎಂ.ಎನ್.ಸುಂದರರಾಜ್, ಎಂ.ರಾಧಾ ಇತರರಿದ್ದರು.
Published on

ಶಿವಮೊಗ್ಗ: ಪರಿಸರವಿದ್ದರೆ ಮಾತ್ರ ಮನುಕುಲದ ಉಳಿವು. ಆರೋಗ್ಯ ಮತ್ತು ಆಯಸ್ಸು ವೃದ್ಧಿಸಲು ಹಸಿರು ನೆರವಾಗುತ್ತದೆ. ಪ್ರತಿಯೊಬ್ಬರೂ ಜೀವನದಲ್ಲಿ ಕನಿಷ್ಟ ಏಳು ಗಿಡಗಳನ್ನಾದರೂ ನೆಟ್ಟು ಬೆಳೆಸಿದರೆ ಅದಕ್ಕಿಂತ ಉತ್ತಮ ಕಾರ್ಯ ಬೇರೊಂದಿಲ್ಲ ಎಂದು ಮಧ್ಯಪ್ರದೇಶದ ಇಂದೋರ್‌ನ ಪರಿಸರ ಪ್ರೇಮಿ ಡಾ. ಶಂಕರ್ ಲಾಲ್ ಗಾರ್ಗ್ ಹೇಳಿದರು.

ದೊಡ್ಡಮ್ಮ ಚಾರಿಟೇಬಲ್ ಟ್ರಸ್ಟ್‌ನಿಂದ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದೊಡ್ಡಮ್ಮ ದೇವಿ ರಾಷ್ಟ್ರೀಯ ಪುರಸ್ಕಾರ ಸ್ವೀಕರಿಸಿ ಮಾತನಾಡಿ, ಪರಿಸರ ಸಮತೋಲನ ಕಾಪಾಡಲು ಅರಣ್ಯ ಸಂಪತ್ತು ಅವಶ್ಯ. ಸರ್ಕಾರಿ ಹುದ್ದೆಯಿಂದ ನಿವೃತ್ತಿ ಬಳಿಕ 22 ಎಕರೆ ಬಂಜರು ಭೂಮಿಯಲ್ಲಿ 50 ಸಾವಿರ ಮರಗಳನ್ನು ಬೆಳೆಸಿದ್ದೇನೆ. ಪರಿಸರದೊಂದಿಗೆ ನನ್ನ ಜೀವನ ಸಾಗಿದೆ. ಮುಂದಿನ ದಿನಗಳಲ್ಲಿಯೂ ಮತ್ತಷ್ಟು ಮರಗಳನ್ನು ಬೆಳೆಸುವ ಯೋಜನೆಯಿದೆ ಎಂದು ತಿಳಿಸಿದರು.

ಹಿರಿಯೂರಿನ ಶಾರದಾಶ್ರಮದ ಅಧ್ಯಕ್ಷೆ ಮಾತಾ ಚೈತನ್ಯಮಯಿ ಮಾತನಾಡಿ, ಪ್ರಶಸ್ತಿ ಪುರಸ್ಕೃತರ ಸಾಧನೆ ಸರ್ವರಿಗೂ ಮಾದರಿಯಾಗಿದೆ. ಭಗವತಿ ನಾಮಸ್ಮರಣೆ, ಉತ್ತಮ ಸಂಸ್ಕಾರಗಳಿಂದ ಜೀವನದಲ್ಲಿ ಸಾಧನೆ ಸಾಧ್ಯ ಎಂದರು.

ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ, ದೇವಿ ಉಪಾಸಕ ಸಿದ್ದಪ್ಪಾಜಿ ಮಾತನಾಡಿ, ನಾವೆಲ್ಲರೂ ಭಗವತಿ ದಾಸರಾಗಿ ಸನ್ಮಾರ್ಗದಲ್ಲಿ ಮುನ್ನಡೆಯಬೇಕು. ಆಗ ಮಾತ್ರ ಇಷ್ಟಾರ್ಥ ಸಿದ್ಧಿಯಾಗಲಿದೆ ಎಂದು ತಿಳಿಸಿದರು.

ಪ್ರಮುಖ ರಸ್ತೆಗಳಲ್ಲಿ ದೊಡ್ಡಮ್ಮ ದೇವಿ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು. ದೊಡ್ಡಮ್ಮ ದೇವಾಲಯದಲ್ಲಿ ತೊಟ್ಟಿಲು ಶಾಸ್ತ್ರ ನೆರವೇರಿತು. 10ಕ್ಕೂ ಹೆಚ್ಚು ಮಕ್ಕಳಿಗೆ ನಾಮಕರಣ ನಡೆಸಲಾಯಿತು. ಮಹಾಶಕ್ತಿ ವಾರ್ಷಿಕ ವಿಶೇಷ 2ನೇ ಸಂಚಿಕೆ ಬಿಡುಗಡೆ ಮಾಡಲಾಯಿತು.

ಲಲಿತಾ ಸಹಸ್ರನಾಮ ಮತ್ತು ಸೌಂದರ್ಯ ಲಹರಿಯನ್ನು ಸಹಸ್ರಾರು ಮಹಿಳೆಯರಿಗೆ ಕಲಿಸುತ್ತಿರುವ ಬೆಂಗಳೂರಿನ ಆಶಾ ಆರ್.ಕುಮಾರ್ ಅವರಿಗೆ ಶ್ರೀ ಲಲಿತಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ವೇಳೆ ಮಾತನಾಡಿದ ಆಶಾ, ಪಾಲಕರು ಮಕ್ಕಳಿಗೆ ವಿದ್ಯೆ ನೀಡುವ ಜತೆಗೆ ಸಂಸ್ಕಾರ ಕಲಿಸಬೇಕು ಎಂದರು.

ಮುಕ್ತಾ ಭಟ್ ನೇತೃತ್ವದಲ್ಲಿ ಸಾಮೂಹಿಕ ದುರ್ಗಾ ಕವಚ ಪಠಣ, ಗಾಯತ್ರಿ ವಿಶ್ವಕರ್ಮ ಭಜನಾ ಮಂಡಳಿ ಅನ್ನಪೂರ್ಣ ಕಾಳಚಾರ್ ನೇತೃತ್ವದಲ್ಲಿ ಭಜನೆ, ಕಾವ್ಯಾ ಅವರಿಂದ ಗಾಯನ ಹಾಗೂ ಸನ್ಮತಿ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಸಾಹಿತಿ ಎಂ.ಎನ್.ಸುಂದರ್‌ರಾಜ್, ಟ್ರಸ್ಟ್ ಕಾರ್ಯದರ್ಶಿ ಎಂ.ರಾಧಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net