

ಕಾರವಾರ/ಯಲ್ಲಾಪುರ: ಅರಣ್ಯ ಅತಿಕ್ರಮಣ ಭೂಮಿ ಸಕ್ರಮಕ್ಕೆ ಇರುವ ಕಾನೂನು ಸರಳೀಕರಣಗೊಳಿಸಿ, ಸಾಮಾಜಿಕ ನ್ಯಾಯ ಕೊಡಲು ಸರ್ಕಾರ ಬದ್ಧವಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ ಭರವಸೆ ನೀಡಿದರು. ಉತ್ತರ ಕನ್ನಡ ಜಿಲ್ಲೆಯ ಗ್ರಾಮ ವಾಸ್ತವ್ಯದ ಭಾಗವಾಗಿ ಯಲ್ಲಾಪುರ ತಾಲೂಕಿನ ಕಿರವತ್ತಿ ಹೊಸಹಳ್ಳಿ ಗೌಳಿವಾಡಾಕ್ಕೆ ಶನಿವಾರ ಭೇಟಿ ನೀಡಿ ಅವರು ಮಾತನಾಡಿದರು. ಜಿಲ್ಲಾದ್ಯಂತ ಸಂಚಾರ ಮಾಡಿದ್ದೇನೆ. ಅಲ್ಲೆಲ್ಲ ಅರಣ್ಯ ಅತಿಕ್ರಮಣ ಭೂಮಿ ಸಕ್ರಮಕ್ಕೆ ಒತ್ತಾಯ ಕೇಳಿಬಂದಿದೆ. ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ 80 ಸಾವಿರಕ್ಕೂ ಅಧಿಕ ಅರಣ್ಯ ಅತಿಕ್ರಮಣದಾರರು ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯದ ಇತರ ಮಲೆನಾಡು ಜಿಲ್ಲೆಗಳಲ್ಲೂ ದೊಡ್ಡ ಸಂಖ್ಯೆಯಲ್ಲಿ ಅರಣ್ಯ ಅತಿಕ್ರಮಣದಾರರಿದ್ದಾರೆ ಎಂದರು. ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕು ಪಡೆಯಲು ಮೂರು ತಲೆಮಾರು (75 ವರ್ಷಗಳು) ದಾಖಲೆ ಒದಗಿಸಬೇಕು ಎಂಬ ನಿಯಮ ಸಡಿಲಗೊಳಿಸಬೇಕು. ಅರಣ್ಯ ಭೂಮಿ ಸಮಸ್ಯೆಯೇ ಜಿಲ್ಲೆಯ ಬಡವರು ಸೌಲಭ್ಯದಿಂದ ವಂಚಿತರಾಗಲು ಕಾರಣವಾಗುತ್ತಿದೆವೆಂದು ಸಚಿವ ಶಿವರಾಮ ಹೆಬ್ಬಾರ, ಶಾಸಕರು ಗ್ರಾಮ ವಾಸ್ತವ್ಯದಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ 15 ಲಕ್ಷ ಎಕರೆ ಡೀಮ್್ಡ ಫಾರೆಸ್ಟ್ ಅನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಿಕೊಳ್ಳಲಾಗುವುದು ಎಂದು ಅಶೋಕ್ ಹೇಳಿದರು.
ಅನುಭವ ನೀಡಿದ ಗ್ರಾಮವಾಸ್ತವ್ಯ: ಶೋಕಿಗಾಗಿ ಒಂದು ದಿನ ಮಲಗಿ, ಎದ್ದು ಹೋಗುವುದಕ್ಕಾಗಿ ಗ್ರಾಮ ವಾಸ್ತವ್ಯ ಮಾಡುತ್ತಿಲ್ಲ. 24 ಗಂಟೆ ಜನರ ಜತೆಗೇ ಇದ್ದು ಅವರ ಸಮಸ್ಯೆ ಅರಿಯುವುದು ಈ ಕಾರ್ಯಕ್ರಮದ ಉದ್ದೇಶ. ಇದರಿಂದ ತಳ ಸಮುದಾಯಗಳ ಸಮಸ್ಯೆಗಳು, ಇಲಾಖೆಯ ಕೆಳ ಹಂತಗಳ ಹಲವು ಗೊಂದಲಗಳು ತಿಳಿದಿವೆ. ಸಮಾಜದ ಕಟ್ಟಕಡೆಯ ಜನರ ಹತ್ತಿರ ಹೋಗಿ ಸಮಸ್ಯೆಗಳನ್ನು ಆಲಿಸಿ, ನ್ಯಾಯ ಕೊಡುವ ಸಲುವಾಗಿ ಈ ಕಾರ್ಯಕ್ರಮ ಮಾಡಲಾಗುತ್ತಿದೆ. ಇಲ್ಲಿನ ಅನುಭವವನ್ನು ಮುಂದೆ ಸಚಿವ ಸಂಪುಟ ಸಭೆಗಳಲ್ಲಿ ರ್ಚಚಿಸಿ ಕಾಯ್ದೆಗಳನ್ನು ರೂಪಿಸುವಾಗ ಅನುಕೂಲವಾಗಲಿದೆ ಎಂದರು.
ಸಮಸ್ಯೆ ಆಲಿಸಿದ ಸಚಿವ: ಉತ್ತರ ಕನ್ನಡ ರಾಜ್ಯದ ಉಳಿದೆಲ್ಲ ಜಿಲ್ಲೆಗಳಿಗಿಂತ ಭಿನ್ನ. ಗೊಂಡ, ಮೀನುಗಾರ, ಹಾಲಕ್ಕಿ, ಗೌಳಿ, ಸಿದ್ದಿ ಹೀಗೆ ವಿವಿಧ ಸಣ್ಣ ಬುಡಕಟ್ಟು ಸಮುದಾಯಗಳನ್ನು ಹೊಂದಿದೆ. ವಿಭಿನ್ನ ಸಮಸ್ಯೆಗಳೂ ಇಲ್ಲಿವೆ. ಸಾಮಾನ್ಯವಾಗಿ ಒಂದೇದಿನ ಗ್ರಾಮ ವಾಸ್ತವ್ಯ ಮಾಡುತ್ತಿದ್ದ ಆರ್.ಅಶೋಕ ಜಿಲ್ಲೆಯ ಕರಾವಳಿ, ಮಲೆನಾಡಿನ ಭಾಗದಲ್ಲಿ 3 ದಿನ ಓಡಾಟ ಮಾಡಿ ಜಿಲ್ಲೆಯ ಸಮಗ್ರ ಚಿತ್ರಣ ಪಡೆದರು. ಸಮಸ್ಯೆ ಆಲಿಸಿದರು. ಇಲ್ಲಿನ ಸಂಸ್ಕೃತಿ, ಸಂಪ್ರದಾಯ, ಬೆಳೆ, ಜನರ ಬೇಡಿಕೆಗಳ ಬಗ್ಗೆ ಅರಿತುಕೊಂಡರು. ಕರಾವಳಿ ಭಾಗದಲ್ಲಿ ವಿಪರೀತ ಸೆಕೆಯಲ್ಲಿ ಮೈತುಂಬ ನುಗ್ಗಿ ಬರುತ್ತಿದ್ದ ಬೆವರನ್ನು ಒರೆಸಿಕೊಳ್ಳುತ್ತ ಸಾವಿರಾರು ಜನರ ಸಮಸ್ಯೆ ಆಲಿಸಿದರು. ಮನವಿ ಸ್ವೀಕರಿಸಿದರು.
ಹೀಗಿತ್ತು ದಿನಚರಿ: ಗ್ರಾಮ ವಾಸ್ತವ್ಯದ ಭಾಗವಾಗಿ ಸಚಿವ ಆರ್.ಅಶೋಕ್ ಅಂಕೋಲಾ ತಾಲೂಕಿನ ಹಿಲ್ಲೂರು ಬಿಸಿಎಂ ಬಾಲಕರ ಮೆಟ್ರಿಕ್ಪೂರ್ವ ವಸತಿ ನಿಲಯದಲ್ಲಿ ಶುಕ್ರವಾರ ರಾತ್ರಿ ಊಟ ಮಾಡಿ ಅಲ್ಲೇ ನಿದ್ರಿಸಿದರು. ವಿದ್ಯಾರ್ಥಿಗಳೊಂದಿಗೆ ಕುಳಿತು ಊಟ ಮಾಡುವ ಪೂರ್ವದಲ್ಲಿ ಅವರಿಂದ ಶಾಂತಿ ಮಂತ್ರ ಹೇಳಿಸಿದರು. ಚಪಾತಿ, ಅಕ್ಕಿ ರೊಟ್ಟಿ, ಆಮ್ಲೆಟ್, ಗೀ ರೈಸ್, ಮೊಸರನ್ನ, ಪನ್ನೀರ್ ಕುರ್ವ, ಪಾಯಸ, ಮಜ್ಜಿಗೆ ಸವಿದರು. ಹಾಸ್ಟೆಲ್ ಪ್ರಾಂಗಣದಲ್ಲೇ ಕೆಲಕಾಲ ವಾಕಿಂಗ್ ಮಾಡಿದರು. ಸಾಮಾನ್ಯ ಕೋಣೆಯಲ್ಲಿ ನೆಲಕ್ಕೆ ಫ್ಯಾನ್ ಹಾಕಿ ಮಲಗಿದರು. ಶನಿವಾರ ಬೆಳಗ್ಗೆ ಎದ್ದು ಪತ್ರಿಕೆಗಳನ್ನು ಓದಿ, ನಿತ್ಯಕರ್ಮ ಮುಗಿಸಿ ನೇರವಾಗಿ ಯಲ್ಲಾಪುರದತ್ತ ಹೊರಟರು. ಯಲ್ಲಾಪುರ ಹೊಸಳ್ಳಿಯ ವಿಠ್ಠಲ ರುಕುಮಾಯಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಗೌಳಿವಾಡದಲ್ಲಿ ವಿಠ್ಠು ಎಡಗೆ ಅವರ ಮನೆಯಲ್ಲಿ ಉಪಾಹಾರ ಸೇವಿಸಿದರು. ಗೌಳಿ ಸಮುದಾಯದವರು ಸಾಂಪ್ರದಾಯಿಕ ಉಡುಗೆ ತೊಟ್ಟು, ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸುವ ಮೂಲಕ ಸಚಿವರನ್ನು ಸ್ವಾಗತಿಸಿದರು.