ಪ್ರಕೃತಿ ಸಂಪತ್ತು ನಾಶವಾದರೆ ಆಪತ್ತು ಖಂಡಿತ; ಡಾ. ಮಾಧುರಿ ಹೇಳಿಕೆ

oplus_2
oplus_2
Published on

ರಾಣೆಬೆನ್ನೂರ: ಪ್ರಕೃತಿ ತಾಯಿ ಎಲ್ಲ ಮಾನವರಿಗೆ ಬೇಕಾದಷ್ಟು ಆಹಾರ ಸಂಪತ್ತು ನೀಡುತ್ತಿದೆ. ಆದರೆ, ಮನುಷ್ಯ ಅದನ್ನು ದುರಾಸೆಗಾಗಿ ಬಳಸಿಕೊಳ್ಳುತ್ತಿದ್ದಾನೆ. ಇದು ನಿಲ್ಲದಿದ್ದರೆ ಮಾನವ ಸಂಕುಲಕ್ಕೆ ಆಪತ್ತು ಎದುರಾಗಲಿದೆ ಎಂದು ವನ್ಯಜಿವಿ ಪರಿಪಾಲಕಿ ಡಾ. ಮಾಧುರಿ ದೇವಧರ ಹೇಳಿದರು.
ಇಲ್ಲಿಯ ಪ್ರಾದೇಶಿಕ ಅರಣ್ಯ ವಿಭಾಗ, ಕೃಷ್ಣಮೃಗ ಅಭಯಾರಣ್ಯ, ವನ್ಯಜಿವಿ ವಿಭಾಗದ ವತಿಯಿಂದ ನಗರದ ಹೊರವಲಯದ ಅರಣ್ಯ ಇಲಾಖೆಯ ಉದ್ಯಾನದಲ್ಲಿ ಬುಧವಾರ ಏರ್ಪಡಿಸಿದ್ದ 70ನೇ ವನ್ಯಜಿವಿ ಸಪ್ತಾಹ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಹುಲಿ, ಆನೆಗಳ ಬಗ್ಗೆ ಚಿಂತನೆ, ಸಂಶೋಧನೆ ನಡೆಯುತ್ತಿದೆ ಹೊರತು ಕೀಟಗಳ ಬಗ್ಗೆ ಸಂಶೋಧನೆ ನಡೆಯುತ್ತಿಲ್ಲ. ಜೇನುಹುಳು ಸೇರಿ ಇತರ ಎಲ್ಲ ಬಗೆಯ ಕೀಟಗಳು ಕಡಿಮೆ ಆಗುತ್ತದೆ. ಕೀಟ ಕಡಿಮೆಯಾದರೆ ಮಾನವನ ಜೀವನ ಅಂತ್ಯದ ಕಡೆಗೆ ಹೋಗುತ್ತಿದೆ ಎಂದರ್ಥ. ಮಾನವನ ದುರಾಸೆಯಿಂದ ಇಂದು ಜಗತ್ತಿನ ಕೆಲಮೊಂದು ಕಡೆ ವರ್ಷಕ್ಕೆ 10 ಮೀ.ಮೀ. ಮಳೆ ಬೀಳುತ್ತಿದೆ. ಇದು ಇದೇ ರೀತಿ ಮುಂದುವರಿದರೆ ಮಾನವ ಸಂಕುಲ ಸಂರ್ಪೂಣ ನಾಶವಾಗಲಿದೆ.
ಎಲ್ಲರೂ ಕಾರ್ಯಕ್ರಮ ಮಾಡುವುದು ಮಾತ್ರವಲ್ಲ. ಇದರ ಜತೆಗೆ ಗಿಡ ಬೆಳೆಸುವ ಕಾರ್ಯ ಮಾಡಬೇಕು. ಗಂಧದ ಗಿಡ, ಬೇವಿನ ಮರ ಬಹಳ ಅಮೂಲ್ಯವಾದ ಗಿಡಗಳು. ಇಂಥವನ್ನು ಉಳಿಸಿ ಬೆಳೆಸಬೇಕು. ರಾಜ್ಯದಲ್ಲಿ 18 ಜಾತಿಯ ಮಣ್ಣು ಇದ್ದರೆ, ಅದರಲ್ಲಿ ಹಾವೇರಿಯಲ್ಲಿಯೆ 11 ಜಾತಿಯ ಮಣ್ಣು ಇದೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ. ಇಂಥ ಸಂಪತ್ತನ್ನು ಉಳಿಸಿಕೊಂಡು ಹೋಗುವ ಕಾರ್ಯ ಪ್ರತಿಯೊಬ್ಬರಿಂದ ಆಗಬೇಕು ಎಂದರು.
ಸಮಾರಂಭಕ್ಕೂ ಮುನ್ನ ನಗರದ ಬಸ್​ ನಿಲ್ದಾಣದಿಂದ ಮೇಡ್ಲೇರಿ ರಸ್ತೆಯ ಚೌಡೇಶ್ವರಿ ದೇವಸ್ಥಾನದ ವರೆಗೆ ವನ್ಯಜಿವಿ ಹಾಗೂ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಜಾಥಾ ನಡೆಸಲಾಯಿತು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್​ ಅಜೀಜ್​, ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್​.ಎಸ್​. ಅಡಿಗ, ಶಿವಾನಂದ ಜಿ., ಉಪ ವಲಯ ಅರಣ್ಯಾಧಿಕಾರಿ ಶರಣಕುಮಾರ ಎಚ್​., ಸತೀಶ ಪೂಜಾರ, ವಿಜಯಕುಮಾರ ದಾಸಪ್ಪನವರ, ಗಿರಿಧರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net