ಪೊಲೀಸ್ ಮೇಲೆ ಹಲ್ಲೆ ಮಾಡಿದ್ದ ವಿದೇಶಿ ಪ್ರಜೆ ಬಂಧನ

Arrest Kaidhi
Published on

ಬೆಂಗಳೂರು: ಹೊಸ ವರ್ಷಾಚರಣೆಯ ವೇಳೆ ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ ವಿದೇಶಿ ಪ್ರಜೆಯನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನೈಜಿರಿಯಾ ಮೂಲದ ಕೆಲ್ವಿನ್ ಬಂಧಿತ ಆರೋಪಿ.

ಪೊಲೀಸ್ ಕಾನ್‌ಸ್ಟೇಬಲ್ ನಾಗರಾಜ್ ಭೀಮಪ್ಪ ಎಂಬುವರ ಹಲ್ಲೆ ಮಾಡಿದ ಆರೋಪದಡಿ ಬಂಧಿಸಲಾಗಿದೆ. ನಾಗರಾಜ್ ಅವರು ಮೂರು ವರ್ಷಗಳಿಂದ ಗೋವಿಂದಪುರ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.೩೧ರ ರಾತ್ರಿ ಎಚ್‌ಬಿಆರ್ ಬಡಾವಣೆ ಬಳಿ ಇತರ ಸಿಬ್ಬಂದಿ ಜತೆ ನಾಗರಾಜ್ ಗಸ್ತು ಕಾರ್ಯದಲ್ಲಿದ್ದರು. ಮಧ್ಯರಾತ್ರಿ ೧.೫೦ ಸುಮಾರಿಗೆ ಪತ್ನಿಯೊಂದಿಗೆ ಕೆಲ್ವಿನ್ ಬರುತ್ತಿದ್ದ ಬೈಕ್ ಅಡ್ಡಗಟ್ಟಿದ ಪೊಲೀಸರು ಆತನನ್ನು ಪ್ರಶ್ನಿಸಿದ್ದರು. ಕುಡಿದ ಮತ್ತಿನಲ್ಲಿ ಹ್ಯಾಪಿ ನ್ಯೂ ಇಯರ್ ಎಂದು ಜೋರಾಗಿ ಕಿರುಚಿ ಏಕಾಏಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ. ಈ ಬಗ್ಗೆ ಪ್ರಶ್ನಿಸಿದ ನಾಗರಾಜ್ ಅವರಿಗೆ ಏಕಾಏಕಿ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದ. ತಪ್ಪಿಸಿಕೊಳ್ಳುವ ಬರದಲ್ಲಿ ನಾಗರಾಜ್ ಅವರ ಕಣ್ಣಿನ ಮೇಲಿನ ಹುಬ್ಬಿಗೆ ರಕ್ತಗಾಯವಾಗಿತ್ತು. ಕೃತ್ಯವೆಸಗುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದ. ನಾಗರಾಜು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net