ಲಡಾಖ್ ಹಿಂಸಾಚಾರದ ಹಿಂದೆ ವಿದೇಶಿ ಕೈವಾಡ...!

Georgia
Published on
Desha Kala Hariprakash Konemane
ಒಂದೂವರೆ ವರ್ಷದ ಹಿಂದೆ ಶ್ರೀಲಂಕಾದಲ್ಲಿ ಆಂತರಿಕ ದಂಗೆ ನಡೆದು ಪ್ರಭುತ್ವ ಬದಲಾಗಿದ್ದು ಇನ್ನೂ ನೆನಪಿನಲ್ಲಿ ಹಚ್ಚ ಹಸಿರಾಗಿಯೇ ಉಳಿದಿದೆ. ಆ ನಂತರದ್ದು ಬಾಂಗ್ಲಾ ದೇಶದ ಸರದಿ. ಮೊಹಮದ್ ಯೂನಸ್ ಎಂಬ ಗೋಮುಖ ರಾಜಕಾರಣಿ ಅಲ್ಲಿನ ಆಂತರಿಕ ದಂಗೆಯ ಹಿಂದಿನ ಪಾತ್ರಧಾರ ಮತ್ತು ಸೂತ್ರಧಾರ. ನೇರವಾಗಿ ಹೇಳಬೇಕೆಂದರೆ ಜಾರ್ಜ್ ಸೊರಾಸ್ ಮತ್ತು ಟೂಲ್ ಕಿಟ್ ಷಡ್ಯಂತ್ರವೇ ಭಾರತದ ಮಗ್ಗುಲಿಗೆ ಬಂದ ಸಂದರ್ಭವದು. ಬಳಿಕದ್ದು ಮೊನ್ನೆ ಮೊನ್ನೆ ನೇಪಾಳದಲ್ಲಿ ನಡೆದ ರಾಜಕೀಯ ವಿಪ್ಲವ. ಆ ಬೆಳವಣಿಗೆಯನ್ನು ಭಾರತದ ಕಡೆ ಶತ್ರು ಪಾಳಯದ ಮತ್ತೊಂದು ಹೆಜ್ಜೆ ಎನ್ನಲು ಅಡ್ಡಿಯಿಲ್ಲ. ಆನಂತರದ ಬೆಳವಣಿಗೆಯನ್ನು ಭಾರತೀಯರಾದ ನಾವು ನಮ್ಮದೇ ಗಡಿಯೊಳಗೆ ಲಡಾಖ್​ನಲ್ಲಿ ಕಾಣುತ್ತಿದ್ದೇವೆ.

ಈಗ ನಾವು ಆಲೋಚನೆ ಮಾಡಬೇಕಾಗಿರುವ ಸಂಗತಿ: ಭಾರತವನ್ನೂ ಅಸ್ಥಿರಗೊಳಿಸುವ ಮತ್ತು ದೇಶದ ಅಭಿವೃದ್ಧಿಗೆ ಅಡ್ಡಿಪಡಿಸುವ ಪಿತೂರಿಯ ಹಿಂದೆ ಯಾರ ಕೈವಾಡವಿದೆ? ಈ ಪ್ರಶ್ನೆ ಪ್ರತಿಯೊಬ್ಬ ದೇಶವಾಸಿಯನ್ನು ಬೆಂಬಿಡದೆ ಕಾಡುತ್ತಿರುವುದು ಸುಳ್ಳಲ್ಲ. ಅದಕ್ಕೆ ಪೂರಕವಾಗಿ ಜಮ್ಮು- ಕಾಶ್ಮೀರದ ಭಾಗವಾಗಿರುವ ಲೇಹ್- ಲಡಾಖ್​ನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಹಿಂದಿನ ಪ್ರತಿಯೊಂದು ಅಂಶಗಳು ತನಿಖೆಯಲ್ಲಿ ಒಂದೊದಾಗಿಯೇ ಬಟಾಬಯಲಾಗುತ್ತಿವೆ. ಲೇಹ್​ನಲ್ಲಿ ನಡೆದ ಹಿಂಸಾಚಾರವು ಆಕಸ್ಮಿಕ ಘಟನೆಯಲ್ಲ, ಬದಲಾಗಿ ಲಡಾಖ್ ಅನ್ನು ಮತ್ತು ಆ ಮೂಲಕ ಇಡೀ ಭಾರತವನ್ನು ಅಸ್ಥಿರಗೊಳಿಸುವ ಸಲುವಾಗಿ ನಡೆಸಲಾದ ಒಂದು ಯೋಜಿತ ಪಿತೂರಿ ಎಂಬುದೂ ಬಯಲಿಗೆ ಬರುತ್ತಿದೆ.

ಭಾರತ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಎಂಬುದು ನಮಗೆ ಹೆಮ್ಮೆ. ಇಲ್ಲಿನ ನೂರಾರು ಭಾಷೆಗಳು, ಸಾವಿರಾರು ಜಾತಿ, ಮತ, ಸಂಸ್ಕೃತಿಗಳು, ಅಸಂಖ್ಯ ಆಚರಣೆಗಳು, ವೈವಿಧ್ಯಮಯ ಜನಜೀವನದ ನಡುವೆಯೂ ವಿವಿಧತೆಯಲ್ಲಿ ಏಕತೆ ಕಾಣಸಿಗುವುದು ಭಾರತದಲ್ಲಿ ಮಾತ್ರ. ಭಾರತದಲ್ಲಿ ಅಸ್ಥಿರತೆ ಸೃಷ್ಟಿಸಲು ನಿನ್ನೆ ಮೊನ್ನೆಯಿಂದಲ್ಲ, ನಾಲ್ಕೈದು ವರ್ಷಗಳಿಂದ ಅಂದರೆ 2021ರಿಂದಲೂ ಟೂಲ್ ಕಿಟ್ ಪಿತೂರಿಗಾರರು ಹಾಗೂ ಜಾರ್ಜ್ ಸೋರಸ್ ಪಡೆಯ ಸದಸ್ಯರು ನಿರಂತರವಾಗಿ ಷಡ್ಯಂತ್ರ ನಡೆಸುತ್ತಲೇ ಇದ್ದಾರೆ. ಅದು ಈಗ ಜಗಜ್ಜಾಹೀರಾಗಿದೆ. ಹಾಗೇ ಸುಮ್ಮನೆ ನೆನಪಿಸುವೆ- 2024ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಮಣಿಸಲು ಅಂತಾರಾಷ್ಟ್ರೀಯ ಏಜೆನ್ಸಿಗಳು ತೆರೆಮರೆಯಲ್ಲಿ ಪಿತೂರಿ ನಡೆಸಿದ್ದವು. ಭಾರತದಲ್ಲಿ ಬಾಲ್ಯ ವಿವಾಹ ಅವ್ಯಾಹತ, ಅಲ್ಪಸಂಖ್ಯಾತರ ಮೇಲಿನ ದಾಳಿ ನಿರಂತರ, ಕೋಮುಗಲಭೆ ಮಾಮೂಲು, ಭಯೋತ್ಪಾದನೆ ನಿರಂತರ, ಭಾರತದಲ್ಲಿ ಧರ್ವಂಧತೆ ಮಿತಿಮೀರುತ್ತಿದೆ, ಪ್ರಜಾತಂತ್ರದ ಕಗ್ಗೊಲೆ ಆಗುತ್ತಿದೆ ಎಂದು ಬಿಂಬಿಸುವುದು ಜಾರ್ಜ್ ಸೋರಸ್ ಮತ್ತು ಆತನ ಪಟಾಲಂನ ಯೋಜಿತ ಕಾರ್ಯತಂತ್ರ.

ಅದರ ಹಿಂದಿನ ಆಲೋಚನೆ ಗುಟ್ಟಾಗೇನೂ ಉಳಿದಿಲ್ಲ. ಹೇಗಾದರೂ ಮಾಡಿ ಪ್ರಧಾನಿ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂಬುದಷ್ಟೆ. ಈ ಅಂತಾರಾಷ್ಟ್ರೀಯ ಪಿತೂರಿಗೆ ಪೂರಕವಾಗಿ ಕಾಂಗ್ರೆಸ್ ಪಕ್ಷ ಹಾಗೂ ಎಡಪಂಥೀಯ ಸಂಘಟನೆಗಳು, ಸ್ವಯಂಘೊಷಿತ ಬುದ್ಧಿಜೀವಿಗಳು ನಿರಂತರವಾಗಿ ಹವಣಿಸುತ್ತಿದ್ದಾರೆ ಮತ್ತು ಹಲವು ಬಾರಿ ಆ ದುಸ್ಸಾಹಸ ಮಾಡಿ ಕೈ ಸುಟ್ಟುಕೊಂಡಿದ್ದಾರೆ.

ಈ ಮಾತಿಗೆ ಉದಾಹರಣೆ ನೋಡುವುದಾದರೆ ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿ ದೆಹಲಿಯ ಶಾಹೀನ್​ಬಾಗ್​ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆ, ರೈತ ಚಳವಳಿ ಸಂದರ್ಭದಲ್ಲಿ ದೆಹಲಿಯ ಕೆಂಪುಕೋಟೆಗೆ ಟ್ರಾ್ಯಕ್ಟರ್ ನುಗ್ಗಿಸಿದ್ದು, ರಫೇಲ್ ಯುದ್ಧವಿಮಾನ ಖರೀದಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂಬ ಸುಳ್ಳಿನ ಸರಮಾಲೆಯನ್ನೇ ಹೆಣೆದದ್ದು. ಇವೆಲ್ಲ ಬಿಡಿ ಬಿಡಿ ಪ್ರಕರಣಗಳಂತೆ ಕಂಡರೂ, ಆಳದಲ್ಲಿ ಒಂದೇ ಷಡ್ಯಂತ್ರದ ಬಟ್ಟೆಗೆ ನೇಯ್ದ ಹೊಲಿಗೆಗಳು. ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ವಿರುದ್ಧವೇ ‘ವೋಟ್ ಚೋರಿ’ ಗುಲ್ಲೆಬ್ಬಿಸಿರುವುದು ತೀರಾ ಇತ್ತೀಚಿನ ಸೇರ್ಪಡೆ ಅಷ್ಟೇ.

ಮೊನ್ನೆ ಲೇಹ್-ಲಡಾಖ್​ನಲ್ಲಿ ನಡೆದ ಹಿಂಸಾಚಾರವೂ ಅಷ್ಟೇ, ಅದಕ್ಕಾಗಿ ಅಲ್ಲಿನ ಯುವಕರನ್ನು ನಾವು ದೂಷಿಸುವಂತಿಲ್ಲ. ಕಾರಣ ಇಷ್ಟೇ, ಝೆನ್ ಝೆಡ್ ಹೆಸರಿನಲ್ಲಿ ಲಡಾಖ್​ನಲ್ಲಿ ಅಲ್ಲಿನ ಯುವಕರನ್ನು ದಾರಿ ತಪ್ಪಿಸಿ ರಾಜಕಾರಣಿಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡರು ಮತ್ತು ಮುಖವಾಡ ಬಯಲಾಗುತ್ತಿದ್ದಂತೆ ಅಮಾಯಕ ಯುವಕರನ್ನು ಕಾನೂನು ಸಂಕಷ್ಟಕ್ಕೆ ದೂಡಿ, ತಾವು ಪಲಾಯನಕ್ಕೆ ಯತ್ನಿಸುತ್ತಿದ್ದಾರೆ. ನೆರೆಯ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳದ ಮಾದರಿಯಲ್ಲಿ ಭಾರತದಲ್ಲೂ ಅಸ್ಥಿರತೆ ಸೃಷ್ಟಿಸಲು ನಗರ ನಕ್ಸಲರು, ದೇಶದ ಹೊರಗಿನ ಭಾರತ ವಿರೋಧಿ ಶಕ್ತಿಗಳು ಮತ್ತು ರಾಹುಲ್ ಗಾಂಧಿಯಂತಹ ಅಪ್ರಬುದ್ಧ ನಾಯಕರು ನಡೆಸುತ್ತಿರುವ ಮಸಲತ್ತಿಗೆ ಲಡಾಖ್​ನಲ್ಲಿ ಆಗಿರುವ ಬೆಳವಣಿಗೆಯೇ ದೊಡ್ಡ ನಿದರ್ಶನ.

ಕಳೆದ ಲೋಕಸಭೆ ಚುನಾವಣೆಯ ಪೂರ್ವದಲ್ಲಿ ಮಣಿಪುರದಲ್ಲಿ ಏಕಾಏಕಿ ಗಲಭೆ ಶುರುವಾಗಿದ್ದು ನೆನಪಿರಬಹುದು. ಈಗ ಲೇಹ್-ಲಡಾಖ್​ನಲ್ಲಿ ಹಿಂಸಾಚಾರ ತಲೆ ಎತ್ತಿದೆ. ರಾಜಕೀಯ ಪ್ರೇರಣೆ ಪಿತೂರಿ ಇಲ್ಲದೆ ನಡೆದ ಸಾಚಾ ಸರಳ ಘಟನೆ ಇದಲ್ಲ ಎಂಬುದು ಎಂಥವನಿಗೂ ಅರ್ಥ ಆಗುವ ಸಂಗತಿ. ಅದಕ್ಕಿಂತ ಮುಖ್ಯವಾಗಿ ಈ ಹಿಂದೆ ಬಾಂಗ್ಲಾ ಮತ್ತು ನೇಪಾಳದಲ್ಲಿ ಅಲ್ಲಿನ ಯುವಪೀಳಿಗೆ ಝೆನ್ ಝೆಡ್ ಹೆಸರಿನಲ್ಲಿ ಗಲಭೆ ನಡೆಸಿದ್ದ ಸಂದರ್ಭದಲ್ಲಿ ಭಾರತದಲ್ಲಿಯೂ ಸಹ ಯುವಪೀಳಿಗೆ ಬೀದಿಗೆ ಇಳಿಯುವ, ಗಲಭೆ ನಡೆಸುವ ಕಾಲ ದೂರವಿಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನೇರವಾಗಿ ಹೇಳಿದ್ದನ್ನು ನೆನಪು ಮಾಡಿಕೊಂಡರೆ ಈಗ ಆಗುತ್ತಿರುವ ಬೆಳವಣಿಗೆಗಳಿಗೆ ಏನು ಕಾರಣ, ಪ್ರೇರಣೆ ಎಂಬುದು ಮನದಟ್ಟಾಗುತ್ತದೆ.

ಬೆಂಕಿ ಇಲ್ಲದೆ ಹೊಗೆಯಾಡಲು ಸಾಧ್ಯವೇ ಇಲ್ಲ. ಲಡಾಖ್ ಗಲಭೆಯ ಹಿಂದಿನ ಅಸಲಿ ರೂವಾರಿಗಳು ಯಾರು ಎಂಬುದು ಈಗಾಗಲೇ ಬಟಾಬಯಲಾಗಿದೆ. ಕಾಂಗ್ರೆಸ್ ನಾಯಕ ಮತ್ತು ಸ್ಥಳೀಯ ಕೌನ್ಸಿಲರ್ ತ್ಸೆಪಾಗ್ ಹಾಗೂ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಪ್ರಚೋದನಕಾರಿ ಭಾಷಣಗಳೇ ಹಿಂಸಾತ್ಮಕ ಪ್ರತಿಭಟನೆಗೆ ಕಾರಣ. ಸರ್ಕಾರ ಉಪವಾಸ ಸತ್ಯಾಗ್ರಹವನ್ನು ಹಿಂತೆಗೆದುಕೊಳ್ಳುವಂತೆ ಅದೆಷ್ಟೇ ಮನವಿ ಮಾಡಿಕೊಂಡರೂ ಸೋನಮ್ ವಾಂಗ್ಚುಕ್ ಸತ್ಯಾಗ್ರಹವನ್ನು ಮುಂದುವರೆಸಿದರು ಮತ್ತು ಅರಬ್ ಸ್ಪ್ರಿಂಗ್ ಶೈಲಿಯ ಪ್ರತಿಭಟನೆಯ ಪ್ರಚೋದನಕಾರಿ ಉಲ್ಲೇಖಗಳು ಹಾಗೂ ನೇಪಾಳದ ಜನರೇಷನ್ ಝೆಡ್ ಪ್ರತಿಭಟನೆಗಳನ್ನು ಉಲ್ಲೇಖಿಸಿ ಅಲ್ಲಿ ಯುವಜನರನ್ನು ಹಾದಿ ತಪ್ಪಿಸಿದರು.

ಲಡಾಖ್ ಸಂಸ್ಕೃತಿ ಮತ್ತು ಸಂಪನ್ಮೂಲಗಳ ರಕ್ಷಣೆಗಾಗಿ ಲಡಾಖ್​ಅನ್ನು ಸಂವಿಧಾನದ ಆರನೇ ಪರಿಚ್ಛೇದಕ್ಕೆ ಸೇರಿಸಬೇಕು. ಲಡಾಖ್​ಗೆ ರಾಜ್ಯದ ಸ್ಥಾನಮಾನವನ್ನು ನೀಡಬೇಕು. ಸ್ಥಳೀಯ ಉದ್ಯೋಗಕ್ಕಾಗಿ ಸಾರ್ವಜನಿಕ ಸೇವಾ ಆಯೋಗ (ಪಿಎಸ್​ಎ) ರಚಿಸಬೇಕು. ಲೇಹ್ ಮತ್ತು ಕಾರ್ಗಿಲ್ ಪ್ರದೇಶಗಳಿಗೆ ತಲಾ ಒಂದು ಲೋಕಸಭೆ ಸ್ಥಾನವನ್ನು ನೀಡಬೇಕು. ಈ ನಾಲ್ಕು ಬೇಡಿಕೆಗಳನ್ನು ಮುಂದಿಟ್ಟುಕೊಂಡು 2019ರಿಂದಲೂ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಆದರೆ ಲಡಾಖ್​ನಲ್ಲಿ ಈ ಮಟ್ಟದ ಹಿಂಸಾತ್ಮಕ ಪ್ರತಿಭಟನೆ ನಡೆದಿರುವುದು ಇತ್ತೀಚಿನ ದಿನಗಳಲ್ಲಿ ಇದೇ ಮೊದಲು.

ಬೌದ್ಧರು ಬಹುಸಂಖ್ಯಾತರಾಗಿರುವ ಲೇಹ್ ಮತ್ತು ಮುಸ್ಲಿಮರು ಬಹುಸಂಖ್ಯಾತರಾಗಿರುವ ಕಾರ್ಗಿಲ್​ನಲ್ಲಿ ಈ ನಾಲ್ಕು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಐದಾರು ವರ್ಷಗಳಿಂದ ಅಲ್ಲಿನ ರಾಜಕೀಯ ಮತ್ತು ಧಾರ್ವಿುಕ ಸಂಘಟನೆಗಳಾದ ಲೇಹ್ ಅಪೆಕ್ಸ್ ಬಾಡಿ (ಎಲ್​ಎಬಿ) ಹಾಗೂ ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (ಕೆಡಿಎ) ಹೋರಾಟ ನಡೆಸುತ್ತಲೇ ಇವೆ. ಆದರೆ ಇಷ್ಟು ದಿನ ಹಿಂಸಾತ್ಮಕ ಸ್ವರೂಪ ಪಡೆಯದ ಈ ಎರಡು ಸಂಘಟನೆಗಳ ಪ್ರತಿಭಟನೆ ಏಕಾಏಕಿ ಘರ್ಷಣೆಯ ಹಾದಿ ಹಿಡಿಯಲು ಕಾರಣ ಈ ಸಂಘಟನೆಯ ಪ್ರಮುಖ ಸದಸ್ಯನಾಗಿರುವ ಸೋನಮ್ ವಾಂಗ್ಚುಕ್. ಹಿಂಸೆಗೆ ವಾಂಗ್ಚುಕ್ ಪ್ರಚೋದನೆ ನೀಡದೇ ಇದ್ದಿದ್ದರೆ ಲೇಹ್-ಲಡಾಖ್ ಹೊತ್ತಿ ಉರಿಯುತ್ತಿರಲಿಲ್ಲ. ಇಲ್ಲಿ ಕಾಡುವ ಮತ್ತೊಂದು ಪ್ರಶ್ನೆ ಏನಂದರೆ ಲೇಹ್-ಲಡಾಖ್ ಸಂಘರ್ಷದ ಸಮಯದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನಸಮೂಹ ಎಲ್ಲಿಂದ ಬಂತು..? ಕೆಲ ವ್ಯಕ್ತಿಗಳನ್ನು ಮಾತ್ರ ಯಾಕೆ ಗುರಿಯಾಗಿಸಿಕೊಳ್ಳಲಾಯಿತು. ಕೆಲ ಕಚೇರಿಗಳಿಗೆ ಮಾತ್ರ ಯಾಕೆ ಬೆಂಕಿ ಹಚ್ಚಲಾಯಿತು ಎಂಬ ಪ್ರಶ್ನೆಗಳಿಗೆ ಉತ್ತರ ಸ್ಪಷ್ಟ. ಭಾರತವನ್ನು ಅಸ್ಥಿರಗೊಳಿಸಲು ಹಾಗೂ ದೇಶದ ಅಭಿವೃದ್ಧಿಯನ್ನು ಹಾಳುಗೆಡವಲು ಕೆಲ ರಾಜಕೀಯ ಪಕ್ಷಗಳ ಸ್ವಾರ್ಥ ರಾಜಕಾರಣ ಹಾಗೂ ವಿದೇಶಿ ಕೈವಾಡ ಇದೀಗ ತನಿಖೆಯಲ್ಲಿ ಒಂದೊಂದಾಗಿಯೇ ಹೊರಬರಲಾರಂಭಿಸಿವೆ. ಶ್ರೀಲಂಕಾ, ಬಾಂಗ್ಲಾ, ನೇಪಾಳದಂತೆ ಭಾರತವನ್ನು ಅಷ್ಟು ಸುಲಭದಲ್ಲಿ ಅಸ್ಥಿರಗೊಳಿಸಲು ಸಾಧ್ಯವಿಲ್ಲ. ಅದಕ್ಕೆ ಕಾರಣ ಇಲ್ಲಿನ ಜನಜೀವನ ಮತ್ತು ಬಲವಾದ ನೇತೃತ್ವ ಎಂಬುದು ನಿಜವೇ ಆದರೂ ಲಡಾಖ್​ನಲ್ಲಿ ಆಗುತ್ತಿರುವ ಬೆಳವಣಿಗೆ ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡು ಎಂಬ ಹಿತನುಡಿಯನ್ನು ಮತ್ತೆ ಮತ್ತೆ ನೆನಪಿಸುವಂತಿದೆ.

(ಲೇಖಕರು ಬಿಜೆಪಿಯ ಹಿರಿಯ ವಕ್ತಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net