

ಶಿವಮೊಗ್ಗ: ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ ನೀಡಲು ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ಮತ್ತು ವಿದ್ಯಾರ್ಥಿ ವೇತನ ಬಿಡುಗಡೆಗೆ ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಡಿಸಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಉದ್ದೇಶದಿಂದ ನಗರ ಹಾಗೂ ಪಟ್ಟಣಗಳಿಗೆ ಬರುತ್ತಾರೆ. ಕಾಲೇಜು ಮತ್ತು ಪ್ರೌಢಶಾಲೆಗಳು ಈಗಾಗಲೇ ಆರಂಭವಾಗಿವೆ. ಆದರೂ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶ ಸಿಕ್ಕಿಲ್ಲ. ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಹಾಸ್ಟೆಲ್‌ಗಳಿಗೆ ಅರ್ಜಿ ಹಾಕಿರುವ ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ಕಾಯುತ್ತಿದ್ದಾರೆ. ಶಾಲಾ ಕಾಲೇಜು ಆರಂಭ ಆಗಿರುವುದರಿಂದ ಅವರಿಗೆ ವಸತಿ ಸಮಸ್ಯೆಯಾಗಿದೆ. ಸರ್ಕಾರ ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರವೇಶಾತಿ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಗುತ್ತಿಲ್ಲ. ಬಡ ವಿದ್ಯಾರ್ಥಿಗಳಿಗೆ ಇದರಿಂದ ತುಂಬ ಕಷ್ಟವಾಗಿದೆ. ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಕಡಿತಗೊಳಿಸಲಾಗಿದೆ. ರೈತ ವಿದ್ಯಾನಿಧಿ ರದ್ದುಗೊಳಿಸಲಾಗಿದೆ. ಸರ್ಕಾರ ಎಲ್ಲ ರೀತಿಯ ವಿದ್ಯಾರ್ಥಿ ವೇತನಗಳನ್ನು ಬಿಡುಗಡೆ ಮಾಡಬೇಕು. ಕಳೆದ ವರ್ಷ ಬಾಕಿಯಿರುವ ವಿದ್ಯಾರ್ಥಿ ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಎಬಿವಿಪಿ ಜಿಲ್ಲಾ ಸಂಚಾಲಕ ಬಿ.ಅಭಿಷೇಕ್, ಪ್ರಮುಖರಾದ ಪುನೀತ್, ಸಚಿನ್, ಲೋಹಿತ್, ಯಶಸ್ವಿನಿ, ರೋಹಿತ್, ಸಿಂಚನಾ ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿದ್ದರು.