ಮೂತ್ರ ಕುಡಿಸಿ ವಿಕೃತಿ ಮೆರೆದು ಯುವಕನ ಬಲಿ ಪಡೆದರು!

SUICIDE
Published on

ಭೋಪಾಲ್: ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದ ಇಬ್ಬರು ಮಹಿಳೆ ಸೇರಿ ಮೂವರಿದ್ದ ಗುಂಪೊಂದು ಯುವಕನೊಬ್ಬನಿಗೆ ಬಲವಂತವಾಗಿ ಮೂತ್ರ ಕುಡಿಸಿ ವಿಕೃತಿ ಮೆರೆದಿದೆ. ಅವಮಾನ ಸಹಿಸದ ಆತ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೂ ಮುನ್ನ ರೆಕಾರ್ಡ್​ ಮಾಡಿದ್ದ ವಿಡಿಯೋ,

ಬರೆದಿದ್ದ ಡೆತ್​ನೋಟ್​ ಆರೋಪಿಗಳನ್ನು ಕಂಬಿ ಹಿಂದಕ್ಕೆ ತಳ್ಳಿದೆ.

ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಬಾಗ್ರಸಜೋರ್ ಗ್ರಾಮದಲ್ಲಿ ಬುಧವಾರ ರಾತ್ರಿ ಈ ದುರ್ಘಟನೆ ನಡೆದಿದೆ. ಬಾಗ್ರಸಜೋರ್ ಗ್ರಾಮದ ಯುವಕ ವಿಕಾಸ್ ಶರ್ಮಾ(19) ಮೃತ. ಗ್ರಾಮದಲ್ಲಿ ಹೊತ್ತುವ ಬೋರ್​ವೆಲ್​ ಬಳಿ ವಿಕಾಸ್ ಗೋಣಿಚೀಲ ತೊಳೆಯುತ್ತಿದ್ದ ವೇಳೆ ಪಕ್ಕದಲ್ಲೇ ಇದ್ದ ಬೇರೆಯವರ ಬಕೆಟ್​ಗೆ ಕೊಳೆನೀರು ಸಿಡಿದಿದೆ. ರೊಚ್ಚಿಗೆದ್ದ ಆ ಬಕೆಟ್​ನ ಮಾಲೀಕರು ಜಗಳ ಮಾಡಿದ್ದಾರೆ. ಯುವಕ ಕ್ಷಮೆ ಕೇಳಿದರೂ ಒಪ್ಪದ ಆರೋಪಿಗಳು ಈತನಿಗೆ ಥಳಿಸಿದ್ದಾರೆ. ಕೊನೆಗೆ ಪಾತ್ರೆಯಲ್ಲಿ ಮೂತ್ರ ತಂದು ಬಲವಂತವಾಗಿ ಯುವಕನಿಗೆ ಕುಡಿಸಿ ವಿಕೃತಿ ಮೆರೆದಿದ್ದಾರೆ. ಮನನೊಂದ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಸಾವಿಗೂ ಮುನ್ನ ಮೊಬೈಲ್​ನಲ್ಲಿ ವಿಡಿಯೋ ರೆಕಾರ್ಡ್​ ಮಾಡಿರುವ ವಿಕಾಸ್​, ಆ ಘಟನೆ ಬಗ್ಗೆ ವಿವರಿಸಿದ್ದಾನೆ. 'ನಾನು ಕೊಳಾಯಿ ಬಳಿ ಚೀಲ ತೊಳೆಯುತ್ತಿದ್ದ ವೇಳೆ ಕೊಳೆ ನೀರು ಸಿಡಿಯಿತೆಂದು ಇದೇ ಗ್ರಾಮದ ತಾರಾವತಿ ಕೊಹ್ಲಿ, ಪ್ರಿಯಾಂಕಾ ಕೊಹ್ಲಿ ಮತ್ತು ಮನೋಜ್ ಕೊಹ್ಲಿ ಜಗಳ ಶುರು ಮಾಡಿದರು. ಕ್ಷಮೆ ಕೇಳಿ, ಆ ಬಕೆಟ್​ಗಳನ್ನು ತೊಳೆದು ಹೊಸದಾಗಿ ನೀರು ತುಂಬಿಸಿ ಕೊಡುವುದಾಗಿ ಹೇಳಿದರೂ ಒಪ್ಪದ ಅವರು ಮನಬಂದಂತೆ ಥಳಿಸಿದರು. ಅಲ್ಲದೆ ತಾಮ್ರದ ಪಾತ್ರೆಯಲ್ಲಿ ಮೂತ್ರ ತಂದ ಮನೋಜ್​ ನನಗೆ ಕುಡಿಯಲು ಹೇಳಿದ. ಇದಕ್ಕೆ ವಿರೋಧಿಸಿದೆ. ಆಗ ನನ್ನ ತಲೆ ಕೂದಲನ್ನು ಮಹಿಳೆಯರಿಬ್ಬರು ಗಟ್ಟಿಯಾಗಿ ಹಿಡಿದುಕೊಂಡರು, ಮನೋಜ್​ ಬಲವಂತವಾಗಿ ಮೂತ್ರ ಕುಡಿಸಿದ. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಈ ಮೂವರೇ ಕಾರಣ' ಎಂದು ಹೇಳಿದ್ದಾನೆ.

ವಿಡಿಯೋ ಜತೆಗೆ ಡೆತ್​ನೋಟ್​ ಬರೆದಿರುವ ವಿಕಾಸ್​, 'ಆ ಮೂವರು ನನಗೆ ಮೂತ್ರ ಕುಡಿಸಿ ನನ್ನನ್ನು ಅಪವಿತ್ರ ಮಾಡಿದರು. ಸಾಯಲು ನಿರ್ಧರಿಸಿದ ನನ್ನನ್ನು ದಯವಿಟ್ಟು ಅಪ್ಪ ಮತ್ತು ಅಮ್ಮ ಕ್ಷಮಿಸಬೇಕು. ಆ ಮೂವರೂ ನನ್ನನ್ನು ಹಿಂಸಿಸಿದ್ದ ಪ್ರತಿಫಲ ಅನುಭವಿಸುತ್ತಾರೆ, ಅವರಿಗೆ ನನ್ನ ಸಾವಿನ ಶಾಪ ಕಾಡಲಿದೆ. ಅಪ್ಪ-ಅಮ್ಮ ನೀವಿಬ್ಬರೂ ನೋಡಲೇಬೇಕಾದ ವಿಡಿಯೋವೊಂದು ನನ್ನ ಮೊಬೈಲ್​ನಲ್ಲಿದೆ' ಎಂದು ಉಲ್ಲೇಖಿಸಿದ್ದಾನೆ.

ಆರೋಪಿಗಳು ಮತ್ತು ಮೃತ ಯುವಕನ ಎರಡೂ ಕುಟುಂಬಗಳ ನಡುವೆ ಹಳೇ ವೈಷಮ್ಯ ಇತ್ತು. ಮನೋಜ್ ಕೊಹ್ಲಿ ಸಹೋದರನನ್ನು ವಿಕಾಸ್ ಶರ್ಮಾನ ಸಂಬಂಧಿ ಒಂದೂವರೆ ವರ್ಷದ ಹಿಂದೆ ಕೊಲೆ ಮಾಡಿದ್ದ. ವಿಕಾಸ್​ ಸಾವಿನ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಶಿವಪುರಿ ಎಸ್ಪಿ

ರಾಜೇಶ್ ಚಂದೇಲ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net