ಎರಡು ವರ್ಷ ಪ್ರೀತಿಸಿ ಮದುವೆಯಾದರು: 12 ಗಂಟೆಗಳಲ್ಲೇ ಮದುವೆ ಮುರಿದು ಹೊರಟಳು ಯುವತಿ

marriage
Published on

ಹಮೀರ್​ಪುರ: ಎರಡು ವರ್ಷಗಳ ಕಾಲ ಪರಸ್ಪರ ಪ್ರೀತಿಸಿ ಮದುವೆಯಾದ ಪ್ರೇಮಿಗಳು ಮದುವೆಯಾಗಿ 12 ತಾಸಿನಲ್ಲಿ ಮತ್ತೆ ಬೇರಾಗಿರುವ ಘಟನೆ ಹಿಮಾಚಲ ಪ್ರದೇಶದ ಹಮೀರ್​ಪುರ ಜಿಲ್ಲೆಯಲ್ಲಿ ನಡೆದಿದೆ.

ಹಮೀರ್​ಪುರದ ಮೌದಾಹ ಪ್ರದೇಶದಲ್ಲಿರುವ ಯುವತಿಯೊಬ್ಬಳು ತನ್ನ ಸಹಪಾಠಿಯಾಗಿದ್ದ ಸಂದೀಪ್​ ಜತೆ ಎರಡು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದಳು. ಇವರಿಬ್ಬರ ಪ್ರೀತಿಯಿಂದಾಗಿ ಬೇಸತ್ತಿದ್ದ ಯುವತಿಯ ಕುಟುಂಬವು ಅವಳನ್ನು ಮನೆಯಿಂದ ಹೊರ ಹಾಕಿತ್ತು.

ಮನೆಯಿಂದ ಹೊರಬಿದ್ದ ಯುವತಿಯು ಸಂದೀಪ್​ನ ಮನೆಗೆ ಬಂದು ಆತನ ಮನೆಯವರನ್ನೆಲ್ಲ ಒಪ್ಪಿಸಿ ಸೋಮವಾರದಂದು ಸಂದೀಪನ ಕುಟುಂಬದ ಆಶೀರ್ವಾದದೊಂದಿಗೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ. ಮದುವೆಯಾಗಿ ಸಂದೀಪ್​ನ ಮನೆಗೆ ಬಂದ ಯುವತಿಗೆ ಒಂದೇ ರಾತ್ರಿಯಲ್ಲಿ ಮನಸ್ಸು ಬದಲಾಗಿದೆ. ಮಂಗಳವಾರ ಬೆಳಗ್ಗೆಯೇ ನನಗೆ ಈ ಮದುವೆ ಬೇಡ, ನಾನು ನನ್ನ ಮನೆಗೆ ಹೋಗುತ್ತೇನೆ ಎಂದು ಹಟ ಹಿಡಿದು ಕುಳಿತಿದ್ದಾಳೆ. ಹೆಂಡತಿಯ ಚಂಚಲ ಮನಸ್ಸಿನಿಂದಾಗಿ ಸಂದೀಪ್​ ಆಕೆಯನ್ನು ತ್ಯಜಿಸಿದ್ದು, ಇದೀಗ ಸ್ಥಳೀಯ ಪೊಲೀಸರು ಆಕೆಯ ತಂದೆ ತಾಯಿಗೆ ಅವಳನ್ನು ತಮ್ಮ ಮನೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.

ಪ್ರೀತಿ ಮಾಡುತ್ತಿರುವಾಗಲೂ ಸಹ ಯುವತಿ ತನ್ನ ಚಂಚಲತೆಯನ್ನು ತೋರಿಸುತ್ತಿದ್ದಳಂತೆ. ಯುವತಿಯ ಮನೆಗೆ ಇವಳ ಪ್ರೇಮ ವಿಚಾರ ತಿಳಿದಾಕ್ಷಣ ಆಕೆಯ ಮನವೊಲಿಸಿ ಸಂದೀಪನ ಮೇಲೆ ಲೈಂಗಿಕ ಕಿರುಕುಳದ ದೂರನ್ನು ಆಕೆಯಿಂದಲೇ ಕೊಡಿಸಿದ್ದರು. ಸಂದೀಪನನ್ನು ಪೊಲೀಸರು ಬಂಧಿಸಿದಾಕ್ಷಣ ಎಚ್ಚೆತ್ತುಕೊಂಡ ಆಕೆ ಮತ್ತೆ ಹೋಗಿ ದೂರನ್ನು ವಾಪಾಸು ಪಡೆದಿದ್ದಳು. ದೂರನ್ನು ವಾಪಾಸು ಪಡೆದಿದ್ದರಿಂದಲೇ ಆಕೆಯ ಮನೆಯವರು ಅವಳನ್ನು ಮನೆಯಿಂದ ಹೊರ ಹಾಕಿದ್ದರು ಎನ್ನಲಾಗಿದೆ. (ಏಜನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net