ಎಚ್​ಎಸ್​ಆರ್​ಪಿ ಹಾಕಿಸದ ವಾಹನಕ್ಕೆ ಸದ್ಯಕ್ಕಿಲ್ಲ ದಂಡ!

k
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಹಳೇ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ (ಎಚ್​ಎಸ್​ಆರ್​ಪಿ) ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ನೀಡಿದ್ದ ಗಡುವು ಭಾನುವಾರ (ಸೆ.15)ಕ್ಕೆ ಮುಕ್ತಾಯವಾಗುತ್ತಿದೆ. ಹೊಸ ಪ್ಲೇಟ್ ಅಳವಡಿಸದ ವಾಹನಗಳ ವಿರುದ್ಧ ಸದ್ಯ ದಂಡ ವಿಧಿಸುವ ನಿರ್ಧಾರವನ್ನು ಸಾರಿಗೆ ಇಲಾಖೆ ಕೈಗೊಂಡಿಲ್ಲ. ಹೀಗಾಗಿ ವಾಹನ ಮಾಲೀಕರು ನಿರಾಳರಾಗಿರಬಹುದು. ಆದರೆ ನಂಬರ್ ಪ್ಲೇಟ್ ಅಳವಡಿಸುವ ಗಡುವನ್ನು ಡಿಸೆಂಬರ್​ವರೆಗೆ ವಿಸ್ತರಿಸುವ ಸಾಧ್ಯತೆ ಇದೆ.

ಸೆ.16ರಿಂದ ದಂಡ ವಿಧಿಸಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ನಂಬರ್ ಪ್ಲೇಟ್ ಅಳವಡಿಕೆ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ಸೆ.18ರಂದು ಹೈಕೋರ್ಟ್​ನಲ್ಲಿ ಬರಲಿದೆ. ಹೀಗಾಗಿ ದಂಡ ವಿಧಿಸುವ ಬಗ್ಗೆ ಇಲಾಖೆ ಅಧಿಕಾರಿಗಳು ತೀರ್ವನಿಸಿಲ್ಲ. ವಿಚಾರಣೆ ನಂತರ ದಂಡ ವಿಧಿಸುವುದೋ ಅಥವಾ ಮತ್ತೆ ಗಡುವು ವಿಸ್ತರಿಸುವುದೋ ಎಂಬುದರ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆ ಎಂದು ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎಚ್​ಎಸ್​ಆರ್​ಪಿ ಅಳವಡಿಸುವ ಗಡುವನ್ನು ಮೂರು ಬಾರಿ ವಿಸ್ತರಿಸಿದರೂ ಅಳವಡಿಸಿಕೊಳ್ಳಲು ವಾಹನ ಮಾಲೀಕರು ನಿರಾಸಕ್ತಿ ತೋರುತ್ತಿದ್ದಾರೆ. ರಾಜ್ಯದ 1.70 ಕೋಟಿ ಹಳೇ ವಾಹನಗಳ ಪೈಕಿ ಈವರೆಗೆ 50 ಲಕ್ಷ ವಾಹನಗಳಿಗಷ್ಟೇ ಅಳವಡಿಸಿಕೊಂಡಿರುವುದರಿಂದ ಗಡುವು ವಿಸ್ತರಣೆ ಅನಿವಾರ್ಯವಾಗಿದೆ. 2019ರ ಏ.1ಕ್ಕಿಂತ ಮೊದಲು ನೋಂದಣಿಯಾಗಿರುವ ಹಳೇ ವಾಹನಗಳಿಗೆ ಈ ನಿಯಮ ಕಡ್ಡಾಯವಾಗಿದೆ. ನಂಬರ್ ಪ್ಲೇಟ್ ಜೋಡಣೆ ಪ್ರಕ್ರಿಯೆಯನ್ನು ವಾಹನ ಉತ್ಪಾದಕ ಕಂಪನಿಗಳ ಅಧಿಕೃತ ಡೀಲರ್​ಗಳಿಗೆ ಟೆಂಡರ್ ಮುಖೇನ ಕೊಡಲಾಗಿದೆ. ರಾಜ್ಯದಲ್ಲಿ ನಂಬರ್ ಪ್ಲೇಟ್ ಪೂರೈಕೆ ಜವಾಬ್ದಾರಿಯನ್ನು ಏಳೆಂಟು ಕಂಪನಿಗಳಿಗೆ ಕೊಡಲಾಗಿದೆ. ಬೆಂಗಳೂರು ಸೇರಿ ರಾಜ್ಯಾದ್ಯಂತ ಅಂದಾಜು 4000ಕ್ಕೂ ಅಧಿಕ ಡೀಲರ್ ಪಾಯಿಂಟ್​ಗಳನ್ನು ಗುರುತಿಸಲಾಗಿದೆ.

4ನೇ ಬಾರಿ ವಿಸ್ತರಣೆ?: 2023ರ ಆ.18ರಂದು ಅಧಿಸೂಚನೆ ಹೊರಡಿಸಿದ್ದ ಸರ್ಕಾರ, ಎಚ್​ಎಸ್​ಆರ್​ಪಿ ಹಾಕಿಸಲು 2023ರ ನ.17ರ ಗಡುವು ವಿಧಿಸಿತ್ತು. ಮಾಲೀಕರ ನಿರಾಸಕ್ತಿ ಹಿನ್ನೆಲೆ 2024ರ ಫೆ.17ರವರೆಗೆ ಮತ್ತೆ ಮೇ 31ರವರೆಗೆ, ಪುನಃ ಸೆ.15ರವರೆಗೆ ಅವಕಾಶ ನೀಡಲಾಗಿತ್ತು.

ಪ್ಲೇಟ್ ಹಾಕಿಸುವುದು ಹೇಗೆ?: Transport.karnataka.gov.in A¥ÜÊÝ www.siam.inಗೆ ಭೇಟಿ ಕೊಟ್ಟು ಬುಕ್ ಎಚ್​ಎಸ್​ಆರ್​ಪಿ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಬೇಕು. ನಂಬರ್ ಪ್ಲೇಟ್ ಅಳವಡಿಕೆಗೆ ಸ್ಥಳ ಆಯ್ಕೆ ಮಾಡಿಕೊಂಡರೆ ಅವರೇ ಬಂದು ಫಿಟ್ ಮಾಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net