

ಅಥಣಿ: ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಲು ರೋಟರಾಕ್ಟ್ ಕ್ಲಬ್ ಸಹಕಾರಿಯಾಗಿದೆ ಎಂದು ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಹೇಳಿದರು.
ಪಟ್ಟಣದ ಕೆಎಲ್‌ಇ ಸಂಸ್ಥೆಯ ಬಿಬಿಎ ಮತ್ತು ಬಿಸಿಎ ಮಹಾವಿದ್ಯಾಲಯದಲ್ಲಿ ರೋಟರಾಕ್ಟ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಈಚೆಗೆ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗಾಗಿ ರೋಟರಿ ಸಂಸ್ಥೆ ರೂಪಿಸಿರುವ ರೋಟರಾಕ್ಟ್ ಕ್ಲಬ್ ಬಹಳ ಅನುಕೂಲವಿದೆ. ರೋಟರಿ ಕ್ಲಬ್ ಸಹಕಾರದೊಂದಿಗೆ ಕೆಲಸ ಮಾಡಲು ಅವಕಾಶ ಒದಗಿಸಲಾಗುವುದು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಸಚಿನ ದೇಸಾಯಿ ಮಾತನಾಡಿ, ರೋಟರಿ ಸಂಸ್ಥೆ ಅಥಣಿಯಲ್ಲಿ 26 ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ, ಪರಿಸರ, ಆರೋಗ್ಯ ಶಿಬಿರ ಹಮ್ಮಿಕೊಂಡು ಅನೇಕ ಸಮಾಜಮುಖಿ ಕಾರ್ಯ ಮಾಡುತ್ತಿದೆ ಎಂದರು.
ರೋಟರಾಕ್ಟ್‌ನ ಅಧ್ಯಕ್ಷ ಗೌರಿಶ ಕಾರ್ಚಿ, ಕಾರ್ಯದರ್ಶಿ ಪ್ರಜ್ವಲ ಕೋಳಿಕರ, ಖಜಾಂಚಿ ಸಚಿನ ರಾವೂರ, ಸಂಯೋಜಕರಾಗಿ ಶಿಲ್ಪಾ ಗದಗ ಪದಗ್ರಹಣ ಸ್ವೀಕರಿಸಿದರು. ರೋಟರಿ ಕ್ಲಬ್ ಸಹಾಯಕ ಪ್ರಾಂತಪಾಲ ಮೇಘರಾಜ ಪರಮಾರ, ಸದಸ್ಯರಾದ ಸಂತೋಷ ಬೊಮ್ಮಣ್ಣವರ, ಶೇಖರ ಕೋಲಾರ, ಅರುಣ ಸೌದಾಗರ, ಅರುಣ ಯಲಗುದ್ರಿ, ಅನಿಲ ದೇಶಪಾಂಡೆ, ಶ್ರೀಕಾಂತ ಅಥಣಿ, ರಮೇಶ ಬುಲಬುಲೆ, ಸೋಮು ವಾಂಗಿ ಇತರರಿದ್ದರು.