

ರಾಣೆಬೆನ್ನೂರ: ಸಾರ್ವಜನಿಕ ಸ್ಥಳ, ಮನೆ ಸೇರಿ ವಿವಿಧ ಕಡೆಗಳಲ್ಲಿ ಆಕಸ್ಮಿಕವಾಗಿ ನಡೆಯುವ ಬೆಂಕಿ, ಪ್ರವಾಹ ಮತ್ತಿತರ ಅವಘಡಗಳು ಸಂಭವಿಸಿದಾಗ ಕೇವಲ ಒಂದು ಕರೆಗೆ ತಮ್ಮ ಜೀವದ ಹಂಗನ್ನು ತೊರೆದು ಸಾರ್ವಜನಿಕರ ಪ್ರಾಣ ಹಾಗೂ ಆಸ್ತಿ-ಪಾಸ್ತಿ ರಕ್ಷಿಸುವ ಅಗ್ನಿಶಾಮಕ ಸಿಬ್ಬಂದಿಯ ಸೇವೆ ಶ್ಲಾಘನೀಯ ಎಂದು ಜೆಸಿಐ ಸಂಸ್ಥೆ ತಾಲೂಕು ಅಧ್ಯಕ್ಷೆ ಲಕ್ಷ್ಮೀ ಅಡಕಿ ಹೇಳಿದರು.
ನಗರದ ಅಗ್ನಿಶಾಮಕ ಠಾಣೆಯಲ್ಲಿ ಜೆಸಿಐ ಸಂಸ್ಥೆಯಿಂದ ಗುರುವಾರ ಆಯೋಜಿಸಿದ್ದ ಸಲ್ಯೂಟ್ ದಿ ಸೈಲೆಂಟ್ ವರ್ಕರ್ ಎಂಬ ವಿನೂತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸೇನೆಯಂತೆ ಅಪತ್ಕಾಲದಲ್ಲಿ ಸೇವೆಗೆ ಧಾವಿಸುವ ಅಗ್ನಿಶಾಮಕ ಸಿಬ್ಬಂದಿ ಕರ್ತವ್ಯದ ವೇಳೆ ತಮ್ಮ ಜೀವವನ್ನೇ ಪಣಕ್ಕಿಡುತ್ತಾರೆ. ಎಲೆಮರೆ ಕಾಯಿಯಂತೆ ಕಾರ್ಯನಿರ್ವಹಿಸುತ್ತಿರುವ ಈ ಸಿಬ್ಬಂದಿಗೆ ಜೆಸಿಐ ಸಂಸ್ಥೆಯು ಸದಾ ಕೈಮುಗಿದು ವಂದಿಸುತ್ತದೆ ಎಂದರು.
ಜೆಸಿಐ ಸಂಸ್ಥೆ ವತಿಯಿಂದ ಅಗ್ನಿಶಾಮಕ ಠಾಣೆಯ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ಠಾಣಾಧಿಕಾರಿ ಎ.ಎಸ್. ಶಿವಳ್ಳಿ, ಸಹಾಯಕ ಠಾಣಾಧಿಕಾರಿ ಎಚ್.ಬಿ. ಹಕ್ಯಾಳವರ, ಎ.ಎಸ್. ಕಿಲ್ಲೇದಾರ, ಡಾ. ಅರುಣಕುಮಾರ ಚಂದನ, ಅಶೋಕ ದುರ್ಗದಶೀಮಿ, ಪ್ರಕಾಶ ಗಚ್ಚಿನಮಠ, ಪ್ರಭುಲಿಂಗಪ್ಪ ಹಲಗೇರಿ, ವೆಂಕಟೇಶ ಕಾಕಿ ಮತ್ತಿತರರು ಉಪಸ್ಥಿತರಿದ್ದರು.