ಸ್ಮಶಾನ ಭೂಮಿ ಅತಿಕ್ರಮಣ ತೆರವಿಗಾಗಿ ಶವವಿಟ್ಟು ಪ್ರತಿಭಟನೆ

10-RNR-07
Published on

ರಾಣೆಬೆನ್ನೂರ: ತಾಲೂಕಿನ ನೂಕಾಪುರ ಗ್ರಾಮದಲ್ಲಿ ಒತ್ತುವರಿಯಾಗಿರುವ ಸ್ಮಶಾನ ಭೂಮಿ ಜಾಗವನ್ನು ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಸೋಮವಾರ ನಗರದ ಮಿನಿ ವಿಧಾನಸೌಧ ಎದುರು ಮೃತ ರೈತನ ಶವವಿಟ್ಟು ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ 3 ಎಕರೆ ಸ್ಮಶಾನ ಭೂಮಿಯಿದೆ. ಅದರಲ್ಲಿ ಒಂದೂವರೆ ಎಕರೆ ಜಾಗವನ್ನು ಒಬ್ಬರು ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಯಾರೇ ಮೃತಪಟ್ಟರೂ ಅಂತ್ಯಸಂಸ್ಕಾರ ನೆರವೇರಿಸಲು ಜಾಗವಿಲ್ಲದಂತಾಗಿದೆ. ಆದ್ದರಿಂದ ಒತ್ತುವರಿಯಾಗಿರುವ ಸ್ಮಶಾನ ಭೂಮಿ ತೆರವುಗೊಳಿಸುವಂತೆ ಹಲವಾರು ವರ್ಷಗಳಿಂದ ತಹಸೀಲ್ದಾರ್​ ಸೇರಿ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ.

ಅಲ್ಲದೆ ತಹಸೀಲ್ದಾರ್​ ಅವರಿಗೆ ಸ್ಥಳಿಯ ಶಾಸಕರು ಸಹ ಸಮಸ್ಯೆ ಬಗೆಹರಿಸಿಕೊಡುವಂತೆ ಸೂಚಿಸಿದ್ದಾರೆ. ಆದರೆ, ತಹಸೀಲ್ದಾರ್​ರು ಯಾವುದೆ ಕಾರಣಕ್ಕೂ ಗ್ರಾಮದ ಕಡೆ ಬಂದು ಸಮಸ್ಯೆ ಕುರಿತು ಆಲಿಸಿಲ್ಲ. ಹೀಗಾಗಿ ತಹಸೀಲ್ದಾರ್​ ವಿರುದ್ಧ ಲೋಕಾಯುಕ್ತ ಅಧಿಕಾರಿಗಳಿಗೂ ದೂರು ಸಲ್ಲಿಸಿದ್ದೇವೆ. ಆದರೂ ನಮಗೆ ನ್ಯಾಯ ದೊರೆತಿಲ್ಲ ಎಂದು ಆರೋಪಿಸಿದರು.

ಆದ್ದರಿಂದ ತಹಸೀಲ್ದಾರ್​ ನಮ್ಮ ಜತೆ ಬಂದು ಕೂಡಲೇ ಸ್ಮಶಾನ ಭೂಮಿ ಒತ್ತುವರಿ ತೆರವುಗೊಳಿಸಿ ಶವ ಸಂಸ್ಕಾರಕ್ಕೆ ಅನುಕೂಲ ಮಾಡಿಕೊಡಬೇಕು. ಅಲ್ಲಿಯವರೆಗೆ ಶವ ತೆಗೆದುಕೊಂಡು ಹೋಗುವುದಿಲ್ಲ ಎಂದು ಪಟ್ಟುಹಿಡಿದರು. ಕೂಡಲೇ ಸ್ಥಳಕ್ಕೆ ಬಂದ ತಹಸೀಲ್ದಾರ್​ ಆರ್​.ಎಚ್​. ಭಾಗವಾನ ಮಾತನಾಡಿ, ಮುಂದಿನ ಒಂದು ವಾರದೊಳಗೆ ಅತಿಕ್ರಮಣ ಆಗಿರುವ ಸ್ಮಶಾನ ಭೂಮಿ ತೆರವುಗೊಳಿಸುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

ಗ್ರಾಮಸ್ಥರಾದ ಗುಡ್ಡಪ್ಪ ಮಲ್ಲಾಡರ, ರವಿ ಮಲ್ಲಳ್ಳಿ, ರವೀಂದ್ರಗೌಡ ಪಾಟೀಲ, ಮಂಜಪ್ಪ ರಣಸೋತ, ಲೋಕಪ್ಪ ಗೂಳೇದ, ಗೋಪಿ ಜಾನಕೊಪ್ಪದ, ದ್ಯಾಮಪ್ಪ ಪಮ್ಮಾರ, ಸೋಮಶೇಖರ ಲಮಾಣಿ, ನಾಗರಾಜ ಒಡತೇರ, ಮಂಜಪ್ಪ ಜಾನಕೊಪ್ಪದ, ನಾಗರಾಜ ನಗಾವತ, ಧರಮೇಂದ್ರ ರಣಸೋತ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net