ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ತಂದೆ ಹಾಗೂ ಮಗನ ಶಾಪಿಂಗ್​ ವಿಡಿಯೋ!Shopping

shopping
Published on

Shopping | ಜನರು ದಿನ ಕಳೆದಂತೆ ತಮ್ಮ ಜೀವನದ ಅನುಭವದ ಆಧಾರದ ಮೇಲೆ ಜಂಕ್​ ಫುಡ್​ ಬದಲಾಗಿ ಆರೋಗ್ಯಕರವಾದ ಆಹಾರ ಸೇವಿಸುವುದರ ಕಡೆ ಗಮನ ಹರಿಸುತ್ತಾರೆ. ಅಂದಹಾಗೆ ಇಲ್ಲೊಬ್ಬ ತಂದೆ ತನ್ನ ಪುಟ್ಟ ಮಗನನ್ನು ಶಾಪಿಂಗ್​ಗೆ ಕರೆದುಕೊಂಡು ಹೋಗಿದ್ದು, ತಂದೆ ತಾಜಾ ಆಹಾರವನ್ನು ಖರೀದಿಸಲು ಮುಂದಾಗಿದ್ದಾರೆ. ಆದರೆ ಆ ಮಗು ಮಾತ್ರ ಕೈಗೆ ಸಿಕ್ಕಂತಹ ಜಂಕ್​ ಫುಡ್​ಗಳನ್ನ ತೆಗೆದುಕೊಳ್ತಿರೋ​ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡ್ತಿದೆ.

ಚಿಕ್ಕ ಮಕ್ಕಳು ತಮ್ಮ ತಂದೆ-ತಾಯಿಯ ಜೊತೆ ಮನೆಯಿಂದ ಹೊರಗಡೆ ಹೋದಾಗ ಐಸ್​ಕ್ರೀಂ ಬೇಕು, ಚಾಕೊಲೇಟ್​ ಬೇಕು ಎಂದು ಹಠ ಮಾಡುತ್ತಾರೆ. ಹೀಗೆ ಎಲ್ಲಾ ಮಕ್ಕಳು ತಮಗೆ ಪ್ರಿಯವಾದ ತಿಂಡಿ ತಿನಿಸುಗಳನ್ನ ಹಠ ಮಾಡಿ ಪಡೆಯುವುದನ್ನ ನಾವು ನೋಡಿಯೇ ಇರುತ್ತೇವೆ. ಆದರೆ ಇಲ್ಲಿ ಅಪ್ಪ ಒಂದು ರೀತಿಯ ಆಹಾರ ಪದಾರ್ಥಗಳನ್ನು ಖರೀದಿಸಿದರೆ, ಮಗ ಮಾತ್ರ ನನಗೆ ಬೇಕಾದ ವಸ್ತುಗಳನ್ನೇ ನಾನು ತೆಗೆದುಕೊಳ್ತೇನೆ ಎಂದು ಜಂಕ್​ಫುಡ್​ಗಳನ್ನ ತೆಗೆದುಕೊಂಡಿರುವ ಈ ವಿಡಿಯೋ ಈಗಾಗಲೇ ಸುಮಾರು 20 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಈ ವಿಡಿಯೋದಲ್ಲಿ ಆ ಮಗು ತನ್ನ ತಂದೆ ಧರಿಸಿರುವ ಕ್ಯಾರಿಯರ್​ ಬ್ಯಾಗ್​ನಲ್ಲಿ ಆರಾಮಾಗಿ ಕುಳಿತುಕೊಂಡು ಶಾಪಿಂಕ್​ ಮಾಡುತ್ತಿರೋದನ್ನು ನಾವು ಗಮನಿಸಬಹುದಾಗಿದೆ. ಇಬ್ಬರೂ ಕೂಡ ಒಟ್ಟಿಗೆ ದಿನಸಿ ಸಾಮಾನುಗಳಿಗಾಗಿ ಶಾಪಿಂಗ್ ಮಾಡುವಾಗ ತಂದೆ ಆರೋಗ್ಯಕರ ವಸ್ತುಗಳನ್ನು ತೆಗೆದುಕೊಂಡೆ, ಆ ಪುಟ್ಟ ಮಗು ಮಾತ್ರ ಅನಾರೋಗ್ಯಕರ ತಿಂಡಿಗಳನ್ನು ಮುದ್ದಾಗಿ ತೆಗೆದುಕೊಂಡಿದೆ.

ತಂದೆ ದ್ರಾಕ್ಷಿಯನ್ನು ತೆಗೆದುಕೊಂಡರೆ ಆ ಪುಟ್ಟ ಮಗ ಬನ್ ಅನ್ನು ತೆಗೆದುಕೊಳ್ಳುತ್ತಾನೆ. ತಂದೆ ಕ್ಯಾರೆಟ್ ಅನ್ನು ಆರಿಸಿದರೆ, ಮಗು ಚಿಪ್ಸ್​ಗಾಗಿ ಕೈ ಹಾಕುತ್ತೆ. ಅವನ ತಂದೆ ಈರುಳ್ಳಿಯನ್ನು ಆರಿಸಿದರೆ, ಮಗು ಮಾತ್ರ ತಿಂಡಿಯ ಪ್ಯಾಕ್​ಅನ್ನು ಆರಿಸಿಕೊಳ್ಳುತ್ತದೆ. ಕೊನೆಯದಾಗಿ ತಂದೆ ರೆಫ್ರಿಜರೇಟರ್‌ನಿಂದ ನೀರಿನ ಬಾಟಲಿಯನ್ನು ತೆಗೆದುಕೊಂಡರೆ, ಮಗ ಮಾತ್ರ ಕೋಲಾ ಬಾಟಲಿಗೆ ಕೈ ಹಾಕುತ್ತಾನೆ. ಇನ್ನೂ ಈ ವಿಡಿಯೋ ಹಾಸ್ಯಮಯವಾಗಿದ್ದರೂ ಸಹ ತಂದೆ ಹಾಗೂ ಮಗುವಿನ ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ. ತಂದೆ ಹಾಗೂ ಮಗನ ವಿಡಿಯೋ ನೋಡಿದ ಎಲ್ಲರೂ ತಮ್ಮ-ತಮ್ಮ ಅಭಿಪ್ರಾಯಗಳನ್ನ ಕಮೆಂಟ್​ ಮೂಲಕ ತಿಳಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net