

ಕೋಲಾರ : ಜಿಲ್ಲೆಯನ್ನು ಆಹಾರ ಸಂಸ್ಕರಣಾ ಹಬ್ ಆಗಿಸಲು ಅಗತ್ಯ ನೆರವು ನೀಡಲು ಸಿದ್ಧವಿದ್ದು, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಟಮಕದಲ್ಲಿನ ಕೃಷಿ ವಿಜ್ಞಾನ ಕೇಂದ್ರದ ನೂತನ ಆಡಳಿತ ಭವನವನ್ನು ಶುಕ್ರವಾರ ಲೋಕಾರ್ಪಣೆ ಮಾಡಿ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಣ್ಣು, ನೀರಿನ ಗುಣಮಟ್ಟ, ರೋಗದ ಪರೀಕ್ಷೆ...ಹೀಗೆ ಕೃಷಿಕರಿಗೆ ಗಿಡಗಳ ಆಸ್ಪತ್ರೆ ತೆರೆಯಲಾಗಿದೆ ಎಂದರು.
ಒಂದು ಜಿಲ್ಲೆ ಒಂದು ಉತ್ಪನ್ನದಡಿ ಕೋಲಾರ ಟೊಮ್ಯಾಟೊ ಬೆಳೆ ಆಯ್ಕೆಯಾಗಿದೆ. ಟೊಮ್ಯಾಟೊ ರಸ್ತೆಗೆ ಹಾಕುವ ದಿನ ತಪ್ಪಬೇಕು. ಆಹಾರ ಸಂಸ್ಕರಣಾ ಘಟಕ ಸ್ಥಾಪನೆ ಸಂಬಂಧ ಜಿಲ್ಲಾಧಿಕಾರಿಗಳು ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಿದರೆ ಕೇಂದ್ರದಿಂದ ನೆರವು ಒದಗಿಸುವುದಾಗಿ ಪ್ರಕಟಿಸಿದರು.
ಕೇಂದ್ರ ಸರ್ಕಾರವು ಆಹಾರ ಸಂಸ್ಕರಣೆ, ಗ್ರೇಡಿಂಗ್, ಬ್ರ್ಯಾಂಡಿಂಗ್, ಕೋಲ್ಡ್ ಸ್ಟೋರೇಜ್, ಗೋದಾಮು ಸೇರಿ ರೈತರಿಗೆ ಸಂಬಂಧಿಸಿದ 25 ಯೋಜನೆಗಳಡಿ ಕಡಿಮೆ ಬಡ್ಡಿಗೆ 2 ಕೋಟಿ ರೂ.ಗಳಿಗೆ ಸಾಲ, ಸಬ್ಸಿಡಿ ನೀಡುತ್ತದೆ. ಗರಿಷ್ಠ 50 ಕೋಟಿ ರೂ.ವರೆಗಿನ ಯೋಜನೆಗೆ ಅವಕಾಶವಿದ್ದು, ಜಿಲ್ಲೆಯಲ್ಲಿ ಹೆಚ್ಚು ಅನುಷ್ಠಾನಗೊಳ್ಳಬೇಕು ಎಂದರು.
ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ 305 ಮಿಲಿಯನ್ ಮೆ.ಟನ್ ಆಹಾರ ಧಾನ್ಯ, 326 ಮಿಲಿಯನ್ ಮೆ.ಟನ್ ತರಕಾರಿ ಮತ್ತು ಹಣ್ಣು ಬೆಳೆದಿದೆ. 135 ಕೋಟಿ ಜನರಿಗೆ ಅಗತ್ಯಕ್ಕಿಂತಲೂ ಹೆಚ್ಚು ಬೆಳೆದಿರುವುದರಿಂದ ಸರಿಯಾಗಿ ಮಾರುಕಟ್ಟೆ, ರಫ್ತು, ಸಂಸ್ಕರಣೆ ಮಾಡದಿದ್ದರೆ ವ್ಯರ್ಥವಾಗುತ್ತದೆ. ಮಾರುಕಟ್ಟೆ ಕಲ್ಪಿಸಲು ಕೇಂದ್ರವು ಅಪೇಡಾವನ್ನು ಕೃಷಿ, ತೋಟಗಾರಿಕೆ ಬೆಳೆ ರಫ್ತು ಮಾಡುವವರ ಜತೆ ಜೋಡಿಸಲು ಬೆಂಗಳೂರಿನಲ್ಲಿ 2 ದಿನ ರಫ್ತುದಾರರ ಸಭೆ ನಡೆಸಲಾಗಿದೆ. ಅಪೇಡಾ ಅಧಿಕಾರಿಗಳನ್ನು ಕೋಲಾರಕ್ಕೂ ಕಳುಹಿಸಿಕೊಡುವೆ, ಜಿಲ್ಲೆಯಿಂದ ಯಾವ ಹಣ್ಣು, ತರಕಾರಿ, ಬೆಳೆಯನ್ನು ರಫ್ತು ಮಾಡಲು ಇರುವ ಸಾಧ್ಯತೆಗಳ ಬಗ್ಗೆ ಚರ್ಚಿಸಿ ಎಂದು ಸಲಹೆ ನೀಡಿದರು.
ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಹಣ್ಣು, ತರಕಾರಿಗಳು ಹೆಚ್ಚು ಬೆಳೆಯುವುದರಿಂದ ಹೊಸ ತಂತ್ರಜ್ಞಾನದಲ್ಲಿ ಬೆಳೆಗಳನ್ನು ಇಲ್ಲೇ ಬೆಳೆದು ಸಂಸ್ಕರಿಸಲು ಆಗ್ರೋ ಪಾರ್ಕ್ ತೆರೆಯಬೇಕು. ಸಂಶೋಧನಾ ಕೇಂದ್ರಗಳನ್ನು ಕೋಲಾರದಲ್ಲೇ ತೆರೆಯಬೇಕು. ಕೋಲಾರ ಎಪಿಎಂಸಿಗೆ ಅವಶ್ಯವಿರುವ 40 ಎಕರೆ ಜಾಗದ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಕೆಯಾಗಿದೆ. ಎಪಿಎಂಸಿಯಲ್ಲಿ ಉತ್ಪನ್ನಗಳಿಗೆ ಕನಿಷ್ಠ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಆಗ್ರೋ ಪ್ರೋಸೆಸಿಂಗ್ ಎಸ್‌ಇಜೆಡ್ ಸ್ಥಾಪಿಸಬೇಕು, ಕೊಯಂಬತ್ತೂರಿನಲ್ಲಿ ಸೂಕ್ಷ್ಮ ನೀರಾವರಿಯಲ್ಲಿ ಅಳವಡಿಸಿರುವ ತಂತ್ರಜ್ಞಾನವನ್ನು ಜಿಲ್ಲೆಯಲ್ಲೂ ಅನುಷ್ಠಾನಗೊಳಿಸುವಂತೆ ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೆ.ಶ್ರೀನಿವಾಸಗೌಡ, ಬೆಳೆಗೆ ಸೂಕ್ತ ಬೆಲೆ ಸಿಗದಿರುವುದರಿಂದ ಸರ್ಕಾರಗಳು ನಿಗದಿತ ಬೆಲೆ ನಿಗದಿಪಡಿಸುವ ಕೆಲಸ ಮಾಡಬೇಕು, ರಾಗಿಗೆ ಬೆಂಬಲ ಬೆಲೆ ಘೋಷಣೆ ಮಾಡಿರುವುದು ಶ್ಲಾಘನೀಯ. ರೈತನಿಗೆ ಯೋಗ್ಯ ಬೆಲೆಯಲ್ಲಿ ಗೊಬ್ಬರ ದೊರಕಿಸಬೇಕು ಎಂದರು.
ಎಮ್ಮೆಲ್ಸಿ ಇಂಚರ ಗೋವಿಂದರಾಜು, ಡಿಸಿ ಡಾ.ಆರ್ ಸೆಲ್ವಮಣಿ, ಜಿಪಂ ಸಿಇಒ ಉಕೇಶ್ ಕುಮಾರ್, ನಗರಸಭೆ ಅಧ್ಯಕ್ಷೆ ಶ್ವೇತಾ ಶಬರೀಶ್, ಕುಡಾ ಅಧ್ಯಕ್ಷ ಓಂಶಕ್ತಿ ಚಲಪತಿ, ತೋಟಗಾರಿಕೆ ವಿವಿ ಆಡಳಿತ ಮಂಡಳಿ ಸದಸ್ಯೆ ಸುಮಿತ್ರಾದೇವಿ, ವ್ಯವಸ್ಥಾಪನಾ ಮಂಡಳಿ ಸದಸ್ಯ ಡಾ.ಎಂ.ಶಿವಮೂರ್ತಿ, ಎಪಿಎಂಸಿ ಅಧ್ಯಕ್ಷ ಮಂಜುನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್, ಐಸಿಎಆರ್ ನಿರ್ದೇಶಕ ಡಾ.ವಿ.ವೆಂಕಟಸುಬ್ರಮಣಿಯನ್, ತೋಟಗಾರಿಕೆ ವಿಜ್ಞಾನಗಳ ವಿವಿಯ ಕುಲಪತಿ ಡಾ.ಕೆ.ಎಂಇಂದಿರೇಶ, ಕೃಷಿ ವಿವಿ ಮುಖ್ಯಸ್ಥ ತುಳಸಿರಾಂ ಇತರರಿದ್ದರು.
ವಿವಿಗಳನ್ನು ಒಂದು ಮಾಡಿ : ಕೃಷಿ ಮತ್ತು ತೋಟಗಾರಿಕೆ ವಿವಿಗಳನ್ನು ಒಂದು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದೇನೆ. ಇದರಿಂದ ರೈತರು, ವಿದ್ಯಾರ್ಥಿಗಳು, ಪ್ರಾಧ್ಯಾಪಕರಿಗೆ ಅನುಕೂಲವಾಗುತ್ತದೆ. ಕೇಂದ್ರ, ರಾಜ್ಯ ಸರ್ಕಾರ ಪರಸ್ಪರ ಹೊಂದಾಣಿಕೆ, ವಿವಿ ಹಾಗೂ ಸಂಶೋಧನೆಯಲ್ಲಿ ಒಗ್ಗೂಡುವಿಕೆ ಸಾಧ್ಯವಾಗುತ್ತದೆ, ಇದು ನಮ್ಮ ಅಪೇಕ್ಷೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.