

ಬೆಂಗಳೂರು: (e-KYC deadline extended) ರೇಷನ್ ಕಾರ್ಡ್ಗೆ ಆಧಾರ್ ದೃಢೀಕರಣ (ಇ-ಕೆವೈಸಿ) ಮಾಡಿಸಲು ಕಾರ್ಡ್ದಾರರಿಗೆ ಮತ್ತೊಮ್ಮೆ ಗಡುವು ಕೊಟ್ಟಿರುವ ಆಹಾರ ಇಲಾಖೆ, ಇಕೆವೈಸಿ ಅವಧಿಯನ್ನು ನ.10ರವರೆಗೆ ವಿಸ್ತರಿಸಿದೆ.
ರಾಜ್ಯದಲ್ಲಿ ಬೋಗಸ್ ಕಾರ್ಡ್ ಪತ್ತೆ ಮತ್ತು ಪಡಿತರ ಸೋರಿಕೆ ತಡೆಗೆ ಇಲಾಖೆ, ಇಕೆವೈಸಿ ಪ್ರಕ್ರಿಯೆ ಕೈಗೆತ್ತಿಗೊಂಡಿದೆ. ಒಟ್ಟು 2.65 ಕೋಟಿ ಬಿಪಿಎಲ್ ಸದಸ್ಯರು ಸೆ.30ರೊಳಗೆ ಇಕೆವೈಸಿ ಮಾಡಿಸಬೇಕೆಂದು ಇಲಾಖೆ ಗುಡುವು ಕೊಟ್ಟಿತ್ತು. ಸರ್ವರ್ ಸಮಸ್ಯೆಯಿಂದ ಇಕೆವೈಸಿ ಮಾಡಿಸಲು ಕಾರ್ಡ್ದಾರರು ಪರದಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಇಕೆವೈಸಿ ಅವಧಿಯನ್ನು ಅ.20ವರೆಗೆ ವಿಸ್ತರಿಸಿ ಸಚಿವ ರಿಜ್ವಾನ್ ಅರ್ಷದ್ ಆದೇಶ ಹೊರಡಿಸಿದ್ದರು.
ಆದರೂ, ಇಕೆವೈಸಿ ಮಾಡಿಸಿಕೊಳ್ಳಲು ಕಾರ್ಡ್ದಾರರು, ತಮ್ಮ ದೈನಂದಿನ ಕಾರ್ಯಗಳನ್ನು ಬಿಟ್ಟು ನ್ಯಾಯಬೆಲೆ ಅಂಗಡಿಗಳ ಮುಂಭಾಗ ಸರದಿ ಸಾಲಿನಲ್ಲಿ ದಿನಗಟ್ಟಲೆ ಕಾಯುತ್ತಿದ್ದಾರೆ. ತಾಂತ್ರಿಕದೋಷ, ಸರ್ವರ್ ಮಂದಗತಿಯ ಕಾರಣದಿಂದ ಸಾಕಷ್ಟು ಬಿಪಿಎಲ್ ಚೀಟಿದಾರರಿಗೆ ಇನ್ನೂ ಇಕೆವೈಸಿ ಮಾಡಿಸಲು ಸಾಧ್ಯವಾಗಿಲ್ಲ. ಹಾಗಾಗಿ, 3ನೇ ಬಾರಿ ಇಕೆವೈಸಿ ಅವಧಿ ವಿಸ್ತರಿಸಲಾಗಿದೆ.
ರೇಷನ್ ಕಾರ್ಡ್ನ ಪ್ರತಿ ಸದಸ್ಯರು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಆಧಾರ್ ದೃಢೀಕರಣ ಮಾಡಿಸಬೇಕು. ಈ ವೇಳೆ ಇಲಾಖೆಯಿಂದ ವರ್ತಕರಿಗೆ ನೀಡಿರುವ ಲಾಗಿನ್ ಐಡಿಯಲ್ಲೇ ಇಕೆವೈಸಿ ಮಾಡಿಸತಕ್ಕದು. ಕಾರ್ಡ್ ಸಂಖ್ಯೆ ನಮೂದಿಸಿದರೆ ಎಷ್ಟು ಸದಸ್ಯರು ಇದ್ದಾರೆ ಎಂಬುದರ ಬಗ್ಗೆ ಮಾಹಿತಿ ಸಿಗುತ್ತದೆ. ಬಳಿಕ, ಎಲ್ಲರೂ ಆಧಾರ್ ದೃಢೀಕರಣ ಮಾಡಿಸಬೇಕು. ಫಲಾನುಭವಿ ಮೃತಪಟ್ಟಿರುವ ಮತ್ತು ಬೇರೆ ಸ್ಥಳದಲ್ಲಿ ವಾಸಿಸುತ್ತಿರುವ ಬಗ್ಗೆ ದೃಢೀಕರಣ ವೇಳೆ ಲೆಕ್ಕ ಸಿಗಲಿದೆ.
ಆನ್ಲೈನ್ನಲ್ಲೂ ಇಕೆವೈಸಿ ಮಾಡಿಸಬಹುದು:
ನಿರಂತರ ಸರ್ವರ್ ಸಮಸ್ಯೆಯಿಂದ ಇ-ಕೆವೈಸಿ ಮಾಡಿಸಲು ಪರದಾಡುತ್ತಿರುವ ಕಾರ್ಡ್ದಾರರ ಅನುಕೂಲಕ್ಕಾಗಿ ಇಲಾಖೆ, ‘ಅನ್ನಸೇವೆ’ ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದೆ. ಗೂಗಲ್ ಪ್ಲೇಸ್ಟೋರ್ನಲ್ಲಿ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಯುಐಡಿಎಐ ಫೇಸ್ ಆಥಂಟಿಕೇಷನ್ ತಂತ್ರಜ್ಞಾನ ಬಳಸಿ ಮನೆಯಲ್ಲಿ ಇಕೆವೈಸಿ ಪೂರ್ಣಗೊಳಿಸಬಹುದು. ‘ಅನ್ನ ಸೇವೆ’ ಆ್ಯಪ್ ಬಳಸುವ ಮುನ್ನ ಫಲಾನುಭವಿಗಳು ತಮ್ಮ ಮೊಬೈಲ್ನ ಗೂಗಲ್ ಪ್ಲೇ ಸ್ಟೋರ್ನಲ್ಲಿ ಸಿಇಜಿ ಫೇಸ್ ಕೆವೈಸಿ ಆ್ಯಪ್, ಆಧಾರ್ ಫೇಸ್ ಆರ್ಡಿ ಮತ್ತು ಅನ್ನಸೇವೆ ಎಂಬ 3 ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಫೇಸ್ ಆಥಂಟಿಕೇಷನ್ ತಂತ್ರಜ್ಞಾನ ಬಳಸಿ ಇಕೆವೈಸಿ ಮಾಡಿಕೊಳ್ಳಬಹುದು.