

ಬೆಂಗಳೂರು: (Yellow Alert' issued for some areas) ಮಲೆನಾಡು, ದಕ್ಷಿಣ ಕರ್ನಾಟಕ ವ್ಯಾಪ್ತಿಯ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 3 ದಿನ ಬಿರುಗಾಳಿ ಮತ್ತು ಗುಡುಗು ಸಹಿತ ಇನ್ನಷ್ಟು ಜೋರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬೆಂ.ದಕ್ಷಿಣ, ಮಂಡ್ಯ, ಮೈಸೂರು ಚಾಮರಾಜನಗರದಲ್ಲಿ ಅ.19ರಿಂದ ಅ.21ರವರೆಗೆ ಹಾಗೂ ಚಿಕ್ಕಮಗಳೂರು, ಕೊಡಗು, ಹಾಸನ ಮತ್ತು ತುಮಕೂರಿನಲ್ಲಿ ಮುಂದಿನ 2 ದಿನ ಬಿರುಸಾಗಿ ಮಳೆ ಸುರಿಯುವ ಸಂಭವ ಇರುವುದರಿಂದ ಯೆಲ್ಲೋ ಅಲರ್ಟ್ ಕೊಡಲಾಗಿದೆ.
ಚಿಕ್ಕಬಳ್ಳಾಪುರ, ಕೋಲಾರ, ದಕ್ಷಿಣಕನ್ನಡದಲ್ಲಿ ಅ.19 ಮತ್ತು ಚಿತ್ರದುರ್ಗದಲ್ಲಿ ಅ.20ರಂದು ಯೆಲ್ಲೋ ಅಲರ್ಟ್ ಇರಲಿದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳದಲ್ಲಿ ಮುಂದಿನ 2 ದಿನ ಸಾಧಾರಣ ಮಳೆ ಸುರಿಯಲಿದೆ. ಉಳಿದೆಡೆ ಒಣಹವೆ ಮುಂದುವರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಈಶಾನ್ಯ ಮಾನ್ಸೂನ್ ಚುರುಕು ಹಿನ್ನೆಲೆಯಲ್ಲಿ ನಾಲ್ಕು ದಿನಗಳಿಂದ ರಾಜ್ಯದ ಹಲವೆಡೆ ವಾಡಿಕೆಗಿಂತ ಅಧಿಕ ಮಳೆಯಾಗಿದೆ.ಪ್ರಮುಖವಾಗಿ ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಉತ್ತಮ ವರ್ಷಧಾರೆಯಾಗಿದೆ. ಅ.22ರಿಂದ ಮಳೆ ಕಡಿಮೆಯಾಗಲಿದೆ ಎಂದು ಹಿರಿಯ ಹವಾಮಾನ ತಜ್ಞ ಡಾ. ಶ್ರೀನಿವಾಸರೆಡ್ಡಿ ಹೇಳುತ್ತಾರೆ.