

ಬೆಂಗಳೂರು: ಕಾವೇರಿ ವ್ಯಾಜ್ಯದಲ್ಲಿ ರಾಜ್ಯ ಮೇಲುಗೈ ಸಾಧಿಸುವುದಕ್ಕೆ ಏನು ಮಾಡಬೇಕು ಎಂಬ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೈಯಕ್ತಿಕ ಸಲಹೆ ನೀಡಿ, ಈ ಪ್ರಯತ್ನದಿಂದ ರಾಜ್ಯಕ್ಕೆ ಜಯವಾಗಲಿದೆ ಎಂದೂ ಹೇಳಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಡಿಕೆಶಿ ವೈಯಕ್ತಿಕ ಪ್ರಕರಣದಲ್ಲಿ ಪರಿಣತ, ಹಿರಿಯ ವಕೀಲರನ್ನು ನೇಮಿಸಿಕೊಂಡು, ಗೆಲುವು ಸಾಧಿಸಿದ್ದಾರೆ. ಅದೇ ರೀತಿ ಕಾವೇರಿ ವ್ಯಾಜ್ಯದಲ್ಲಿ ರಾಜ್ಯದ ಪರವಾಗಿ ನುರಿತ, ಹಿರಿಯ ವಕೀಲರನ್ನು ನೇಮಕ ಮಾಡಿ ಗೆಲುವು ಸಾಧಿಸಿಕೊಳ್ಳಬೇಕು ಎಂದು ತಿವಿದಿದ್ದಾರೆ.
ಕಾವೇರಿ ವಿವಾದ ಸಮರ್ಪಕವಾಗಿ ನಿರ್ವಹಿಸುವಲ್ಲಿ ಮೊದಲಿಂದಲೂ ಸರ್ಕಾರ ಎಡವಿದೆ. ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಲಿಲ್ಲ. ತಮಿಳುನಾಡು ಅಚ್ಚುಕಟ್ಟು ಪ್ರದೇಶ ವಿಸ್ತರಣೆ, ನೀರು ಬಳಕೆ ಅಂಕಿ-ಅಂಶಗಳು, ರಾಜ್ಯದ ಸಂಕಷ್ಟವನ್ನು ನಿವೇದಿಸಬಹುದಿತ್ತು. ಆದರೆ ಅಫಿಡವಿಟ್ ಸಲ್ಲಿಸಿ ಕಾಲಯಾಪನೆ ಮಾಡಿತು.
ಇದು ಸಾಲದೆಂಬದಂತೆ ಮೊದಲ 15 ದಿನಗಳ 10 ಸಾವಿರ ಕ್ಯುಸೆಕ್, ನಂತರ 15 ದಿನ ಐದು ಸಾವಿರ ಕ್ಯುಸೆಕ್ ನೀರು ಬಿಟ್ಟಿತು. ಇದರಿಂದಾಗಿ ಕಾವೇರಿ ನೀರು ನಿರ್ವಹಣಾ ಸಮಿತಿ ಮತ್ತೆ 15 ದಿನಗಳ ಕಾಲ ಐದು ಸಾವಿರ ಕ್ಯುಸೆಕ್ ನೀರು ಬೀಡಲು ಸೂಚಿಸಿದೆ. ತಮಿಳುನಾಡು ರೈತರ ಹಿತರಕ್ಷಣೆ ಬಗ್ಗೆಯೂ ಡಿಕೆಶಿ ಮಾತನಾಡಿರುವುದು ಕೋರ್ಟ್‌ನಲ್ಲಿ ದಾಖಲಾಗುತ್ತದೆ ಎಂಬ ಎಚ್ಚರಿಕೆಯೂ ಇರಬೇಕಿತ್ತು.
ಐಎನ್‌ಡಿಐಎ ಒಕ್ಕೂಟದ ಮಿತ್ರಪಕ್ಷ ಡಿಎಂಕೆ ತಮಿಳುನಾಡಿನಲ್ಲಿ ಅಧಿಕಾರದಲ್ಲಿದೆ. ಮಿತ್ರಪಕ್ಷದ ಸಿಎಂ ಸ್ಟಾಲಿನ್ ಅವರನ್ನು ಮನವೊಲಿಸಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸಿದ್ಧವಿಲ್ಲ. ಈ ವ್ಯಾಜ್ಯ ಸುಪ್ರೀಂ ಕೋರ್ಟ್‌ನಲ್ಲಿರುವಾಗ ಪ್ರಧಾನಿ ಮಧ್ಯೆ ಪ್ರವೇಶ ಸಾಧ್ಯವಿಲ್ಲ. ಆದರೂ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿರುವುದು ರಾಜಕಾರಣದ ನಿಲುವು ಎಂದು ಬೊಮ್ಮಾಯಿ ವಾಗ್ದಾಳಿ ಮಾಡಿದರು.