

ಬೇಲೂರು: ಸತ್ತು ಬದುಕಿದವರ, ಇದ್ದು ಸತ್ತಂತಿರುವವರ ನಡುವೆ ಶ್ರೇಷ್ಠವೆಂದರೆ ಸತ್ತು ಬದುಕಿರುವವರೇ ಶ್ರೇಷ್ಠರು. ಸತ್ತು ಬದುಕಿರುವವರು ಈ ಜಗತ್ತಿನಲ್ಲಿ ಲೆಕ್ಕವಿಲ್ಲದಷ್ಟು ಮಹಾತ್ಮರು, ಶರಣರು, ಸಂತರು ಬಾಳಿ ಬದುಕಿ, ಬದುಕಿಗೆ ಬೇಕಾದ ಮೌಲ್ಯಗಳನ್ನು ಕೊಟ್ಟಿದ್ದು ಅವುಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಪುಷ್ಪಗಿರಿ ಮಹಾಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಟ್ರಸ್ಟ್, ಶರಣ ಸಾಹಿತ್ಯ ಪರಿಷತ್ತು, ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಟ್ರಸ್ಟ್, ನೌಕರರ ಕ್ಷೇಮಾಭಿವೃದ್ಧಿ ಸಂಘ, ಪುರೋಹಿತರ ಕ್ಷೇಮಾಭಿವೃದ್ಧಿ ಟ್ರಸ್ಟ್ ಸಹಯೋಗದೊಂದಿಗೆ ಶಿವಕುಮಾರ ಸ್ವಾಮೀಜಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ 118ನೇ ಜನ್ಮ ದಿನೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ನಾವು ನಾಲ್ಕು ಯುಗಗಳನ್ನು ಮೀರಿ ನಿಂತಿದ್ದೇವೆ. ಹಿಂದೆ 100ಕ್ಕೆ 100ರಷ್ಟು ಸತ್ಯ ಹೇಳುತಿದ್ದರು. ಆಗ ಅವರ ಆಯಸ್ಸು 400 ವರ್ಷವಿತ್ತು. ನಂತರದಲ್ಲಿ ಮನುಷ್ಯನ ಆಯಸ್ಸು ಕ್ಷೀಣಿಸುತ್ತಿದೆ. ಕಲಿಯುಗದಲ್ಲಿ 50 ರಿಂದ 60 ವರ್ಷವಷ್ಟೇ ಆಯಸ್ಸು. 800-900 ವರ್ಷಗಳ ಹಿಂದೆ ಶರಣರು ಬದುಕಿಗೆ ಬೇಕಾದ ಮೌಲ್ಯಗಳನ್ನು ತಿಳಿಸಿಕೊಟ್ಟಿದ್ದಾರೆ. ಇಂದು 130 ಕೋಟಿ ಜನರಿದ್ದರೂ ಸತ್ತಂತೆ ಬದುಕುತಿದ್ದೇವೆ. ಇಲ್ಲಿ ಶರಣರ ಮೌಲ್ಯಗಳನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಾರೋ ಅವರ ಜೀವನ ಸಾರ್ಥಕವಾಗುತ್ತದೆ. ಬಸವಣ್ಣನವರ ಆದರ್ಶಗಳನ್ನು ಚಾಚೂ ತಪ್ಪದೆ ಪಾಲಿಸಿದವರಲ್ಲಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅಗ್ರಗಣ್ಯರು. 118 ವರ್ಷಗಳ ನಂತರವೂ ಅವರನ್ನು ನೆನಪಿಸಿಕೊಳ್ಳುತ್ತೇವೆ. 80 ವರ್ಷಗಳ ಹಿಂದೆ ಕಷ್ಟಪಟ್ಟು ಸಂಸ್ಥೆ ಮತ್ತು ಮಠವನ್ನು ಕಟ್ಟಿದ್ದಾರೆ. ಅವರು ಶಿಕ್ಷಣ ಸಂಸ್ಥೆಯೊಂದಿಗೆ ದಾಸೋಹದ ಮೂಲಕ ಬಡವರ ಬದುಕಿನಲ್ಲಿ ಬೆಳಕಾಗಿದ್ದಾರೆ. ಅಲ್ಲದೆ ಸ್ವತಃ ಗುರುಗಳೇ ಜಮೀನಿಗೆ ತೆರಳಿ ಉಳುಮೆ ಮಾಡಿ ಬೆಳೆ ಬೆಳೆದು ಉಣ ಬಡಿಸುತಿದ್ದರು. ಹಿಂದೆ ಗುರುಗಳನ್ನು ದೂರದಿಂದಲೇ ಗೌರವಿಸುತ್ತಿದ್ದರು. ಆದರೆ ಇಂದು ಭಕ್ತಿ ಕ್ಷೀಣಿಸುತ್ತಿದೆ. ನಾವು ಸ್ವಾಮೀಜಿ ಅವರ ಜಯಂತಿ ಮತ್ತು ಸ್ಮರಣೆ ಆಚರಿಸಿದರೆ ಸಾಲದು. ಅವರಂತೆ ಬದುಕು ನಡೆಸಬೇಕು. ಶಿವಕುಮಾರ ಸ್ವಾಮೀಜಿ ಅವರಂತೆ ಸಿದ್ದೇಶ್ವರ ಸ್ವಾಮೀಜಿ ಸಹ ಒಬ್ಬರು. ಅವರ ಮಾತುಗಳು ಎಲ್ಲರ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುತ್ತಿತ್ತು. ನಾವು ಕೇವಲ ಮಾನವರಾಗದೆ ದೇವ ಮಾನವರಾಗಬೇಕಿದೆ. ಪೂಜ್ಯರು ಹೇಳಿದಂತೆ ನಾವು ಜಾತಿ-ಧರ್ಮ ಎಂಬುದನ್ನು ಬಿಟ್ಟು ನಡೆದರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.
ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರು ಜಾತಿ, ಧರ್ಮ ಎನ್ನದೆ ಎಲ್ಲರಿಗೂ ತ್ರಿವಿಧ ದಾಸೋಹದ ಮೂಲಕ ಆಧುನಿಕ ಬಸವಣ್ಣರಾಗಿದ್ದಾರೆ. 120ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಶ್ರೀಗಳಿಗೆ ಕರ್ನಾಟಕ ರತ್ನ ಸೇರಿದಂತೆ ಹಲವಾರು ಪ್ರಶಸ್ತಿಗಳು ಬಂದಿದ್ದರೂ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ಗೌರವಿಸಬೇಕೆಂದು ಒತ್ತಾಯಿಸುತ್ತೇನೆ. ಸದಸ್ಯರ ಒಪ್ಪಿಗೆ ಪಡೆದು ಪಟ್ಟಣದ ಯಾವುದಾದರೂ ಒಂದು ಬೀದಿಗೆ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನಿಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಅಡಗೂರು ಬಸವರಾಜ್ ಮಾತನಾಡಿ, ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಕಾಯಕದ ಮೂಲಕ ಮಹತ್ತರವಾದ ಸಾಧನೆ ಮಾಡಿದ್ದಲ್ಲದೆ, ದಾಸೋಹದ ಮೂಲಕ ಮನೆ ಮಾತಾಗಿದ್ದಾರೆ. ಶ್ರೀಗಳು ರೈತರು ಮತ್ತು ಅನ್ನಕ್ಕೆ ಹೆಚ್ಚು ಮಹತ್ವ ನೀಡುತಿದ್ದರು. ಶಿಶ್ರಮಠದಲ್ಲಿ ಜಾತಿ, ಧರ್ಮ ಎನ್ನದೆ ಎಲ್ಲರಿಗೂ ತ್ರಿವಿಧ ದಾಸೋಹದ ಮೂಲಕ ಬಡವರ ಬದುಕಲ್ಲಿ ಅಶಾಕಿರಣವಾಗಿದ್ದಾರೆ. ಆದ್ದರಿಂದ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಿ ಮುನ್ನಡೆದಾಗ ಮಾತ್ರ ಸ್ವಾಮೀಜಿಗೆ ಗೌರವ ಕೊಟ್ಟಂತ್ತಾಗುತ್ತದೆ ಎಂದರು.
ವೀರಶೈವ ಲಿಂಗಾಯತ ರಾಜ್ಯ ಯುವ ಘಟಕದ ಕಾರ್ಯದರ್ಶಿ ವಿಕ್ರಂ ಕೌರಿ, ಮಹಿಳಾಧ್ಯಕ್ಷೆ ವಿಂಪು, ನೌಕರರ ಸಂಘದ ಅಧ್ಯಕ್ಷ ಪಾಲಾಕ್ಷ, ಮುಖಂಡರಾದ ರವಿಕುಮಾರ್, ಅದ್ದೂರಿ ಕುಮಾರ್, ಅರುಣ್‌ಕುಮಾರ್, ಹಾಲಪ್ಪ, ಮದನ್, ಸುನೀಲ್, ಹರೀಶ್, ಬಿ.ಬಿ.ಶಿವರಾಜ್ ಸೇರಿದಂತೆ ಇತರರಿದ್ದರು.