ಸ್ಮೋಕಿಂಗ್ ಬಿಡಲು START ಮಾಡಿ; ಕ್ಲಬ್​ಹೌಸ್​ ಸಂವಾದ..

Club house
ತಂಬಾಕು ದುಷ್ಪರಿಣಾಮಗಳ ಕುರಿತು ಬೆಂಗಳೂರಿನಲ್ಲಿ ಬುಧವಾರ ಬೀದಿ ನಾಟಕದ ಮೂಲಕ ಅರಿವು ಮೂಡಿಸಿದ ವಿಶ್ವಭಾರತಿ ತಂಡ.
Published on
ವಿಶ್ವದ ಅತಿ ಹೆಚ್ಚು ತಂಬಾಕು ಬಳಕೆ ದೇಶಗಳ ಪಟ್ಟಿಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಧೂಮಪಾನ ತ್ಯಜಿಸುವಂತೆ ಪ್ರೇರೇಪಿಸಲು ಪ್ರತಿವರ್ಷ ಮಾರ್ಚ್ ಎರಡನೇ ಬುಧವಾರ ‘ಧೂಮಪಾನರಹಿತ ದಿನ’ ಆಚರಿಸಲಾಗುತ್ತದೆ. ಧೂಮಪಾನದಿಂದಾಗುವ ದುಷ್ಪರಿಣಾಮಗಳು ಹಾಗೂ ಅದರಿಂದ ಮುಕ್ತರಾಗಲು ಅನುಸರಿಸಬೇಕಾದ ಮಾಗೋಪಾಯಗಳು ಮತ್ತು ಚಿಕಿತ್ಸಾ ವಿಧಾನಗಳ ಕುರಿತು ನಿಮ್ಹಾನ್ಸ್​ನ ದುಶ್ಚಟ ನಿವಾರಣಾ ಕೇಂದ್ರದ ಡಾ.ದರ್ಶನ್ ಹಾಗೂ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಆಯುರ್ವೇದ ಸಂಸ್ಥೆ ಮತ್ತು ಆಸ್ಪತ್ರೆಯ ಪಂಚಕರ್ಮ ವಿಭಾಗದ ಮುಖ್ಯಸ್ಥ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ.ವಿ.ನಿತಿನ್ ಅವರು ನೀಡಿರುವ ಮಾಹಿತಿ ಇಲ್ಲಿದೆ.

ವ್ಯಸನಕ್ಕೆ ಚಿಕಿತ್ಸೆ ಲಭ್ಯ

| ಡಾ. ದರ್ಶನ್

ಧೂಮಪಾನ ಎಂದರೆ ಸ್ಮೋಕಿಂಗ್ ಹಾಗೂ ಸ್ಮೋಕ್​ಲೆಸ್ ಎಂದು ಎರಡು ರೀತಿ ಇರುತ್ತದೆ. ನಗರ ಪ್ರದೇಶದವರು ಹೆಚ್ಚು ಬೀಡಿ ಮತ್ತು ಸಿಗರೇಟ್ ಬಳಕೆ ಮಾಡುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಹೊಗೆಸೊಪು್ಪ, ಗುಟ್ಖಾ, ಜರ್ದಾ ಇನ್ನಿತರ ರೀತಿಯಲ್ಲಿ ಬಳಕೆ ಮಾಡುತ್ತಾರೆ. ಇದರ ವ್ಯಸನಕ್ಕೆ ಒಳಗಾದವರಿಗೆ ನಿಮ್ಹಾನ್ಸ್​ನ

ದುಶ್ಚಟ ನಿವಾರಣಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ವ್ಯಸನಿಗಳು ಯಾವ ರೀತಿಯ ತಂಬಾಕನ್ನು ಹೇಗೆ ಹಾಗೂ ಎಷ್ಟು ವರ್ಷಗಳಿಂದ ಬಳಕೆ ಮಾಡುತ್ತಿದ್ದಾರೆ? ಈಗ ಬಿಡಲು ಕಾರಣ ಸ್ವಯಂಪ್ರೇರಿತರಾಗಿಯಾ ಅಥವಾ ಒತ್ತಾಯದಿಂದಾಗಿಯಾ? ಈ ಎಲ್ಲಾ ಮಾಹಿತಿ ತಿಳಿದು ನಂತರ ಚಿಕಿತ್ಸೆ ಆರಂಭಿಸಲಾಗುತ್ತದೆ.

ಧೂಮಪಾನ ಪ್ರಾರಂಭಿಸಲು ಅನೇಕ ಕಾರಣಗಳಿರಬಹುದು. ಅದು ಒಂದು ಹಂತಕ್ಕೆ ಹೋದ ಮೇಲೆ ತ್ಯಜಿಸುವುದು ತುಂಬಾ ಕಷ್ಟಸಾಧ್ಯ. ಏನೇ ಕೆಲಸ ಮಾಡುತ್ತಿದ್ದರೂ, ನಡುವೆ ಒಮ್ಮೆ ಧೂಮಪಾನ ಮಾಡಲು ಮಿದುಳು ಪ್ರೇರೇಪಿಸುತ್ತದೆ. ಧೂಮಪಾನ ಮಾಡದಿದ್ದರೆ ಏನೋ ಕಳೆದುಕೊಂಡ ಭಯ ಕಾಡಲು ಪ್ರಾರಂಭಿಸುತ್ತದೆ. ಪ್ರತಿ ವಿಷಯಕ್ಕೆ ಗಾಬರಿ ಆಗುತ್ತದೆ. ಆಗ ಒಮ್ಮೆ ಸ್ಮೋಕ್ ಮಾಡಿದರೆ ನಿರಾಳರಾಗುತ್ತಾರೆ. ಇದನ್ನು ವಿಥ್​ಡ್ರಾಲ್ ಎಂದು ಕರೆಲಾಗುತ್ತದೆ.

ನಿಕೋಟಿನ್ ರಿಪ್ಲೇಸ್​ವೆುಂಟ್ ಥೆರಪಿ: ಧೂಮಪಾನ ತ್ಯಜಿಸಲು ನಿಕೋಟಿನ್ ರಿಪ್ಲೇಸ್​ವೆುಂಟ್ ಥೆರಪಿಯಲ್ಲಿ ಹಲವು ವಿಧಾನಗಳಿವೆ. ಚ್ಯೂಯಿಂಗ್ ಗಮ್ , ಪ್ಯಾಚ್ ಬ್ಯಾಂಡ್, ಚಾಕೊಲೇಟ್, ಇನ್​ಹೇಲರ್, ಮಾತ್ರೆಗಳು ಹೀಗೆ ರೋಗಿಯ ವ್ಯಸನದ ಪ್ರಮಾಣ ಹಾಗೂ ಆರೋಗ್ಯ ಸ್ಥಿತಿ ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ. ಇವೆಲ್ಲವನ್ನು ವೈದ್ಯರ ಸಲಹೆ ಪಡೆದು ಬಳಸುವುದು ಸೂಕ್ತ.

ಇ -ಸಿಗರೇಟ್ ನಿಷೇಧ: ಇ-ಸಿಗರೇಟ್​ನಿಂದಲೂ ವ್ಯಸನಿಗಳಾಗುವ ಸಾಧ್ಯತೆ ಇರುವುದರಿಂದ ಸರ್ಕಾರ ಸದ್ಯ ಅದನ್ನು ನಿಷೇಧಿಸಿದೆ. ಇದನ್ನು ಚಿಕಿತ್ಸೆಯಲ್ಲಿ ಬಳಕೆ ಮಾಡುತ್ತಿಲ್ಲ. ಇದಲ್ಲದೆ ನಿಯಮ ಉಲ್ಲಂಘಿಸಿ ತಂಬಾಕು ಉತ್ಪನ್ನ ಮಾರಾಟ ಮಾಡಿದವರಿಗೆ ದಂಡ ವಿಧಿಸುವ ಮೂಲಕ ನಿಯಂತ್ರಣ ಕ್ರಮ ಕೈಗೊಂಡಿದೆ.

ಧೂಮಪಾನ ತ್ಯಜಿಸಲು ಕರೆ ಮಾಡಿ: ಧೂಮಪಾನ ತ್ಯಜಿಸಲು ನಿಮ್ಹಾನ್ಸ್​ನ ಸೇವೆ ಮತ್ತು ಸಲಹೆ ಪಡೆಯಲು ಎಂ ಇಂಟರ್​ವೆನ್ಷನ್ ಫಾರ್ ಟೊಬ್ಯಾಕೋಗಾಗಿ ದೂ. 01122901701 ಕರೆ ಮಾಡಿದರೆ ಮೊಬೈಲ್ ಮೆಸೇಜ್ ಮೂಲಕ ಸಲಹೆ ನೀಡಲಾಗುವುದು. ಹಾಗೂ ಟೊಬ್ಯಾಕೋ ಕ್ವಿಟ್ ಲೈನ್​ಗೆ 1800112356 ಸಂರ್ಪಸಿದರೆ ತಜ್ಞರೊಂದಿಗೆ ನೇರವಾಗಿ ಸಂಭಾಷಣೆ ನಡೆಸಿ ಸಲಹೆ ಪಡೆಯಬಹುದಾಗಿದೆ. ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲೂ ಚಿಕಿತ್ಸೆ ಪಡೆಯಬಹುದಾಗಿದೆ.

ತಿಳಿಯದೆ ಔಷಧ ಕೊಡಬೇಡಿ: ಧೂಮಪಾನ, ಮದ್ಯಪಾನ ಅಥವಾ ಇತರ ವ್ಯಸನಿಗಳಾದ ವರಿಗೆ ಅವರ ಮನೆಯವರು ವೈದ್ಯರ ಸಲಹೆ ಇಲ್ಲದೆ ಅಥವಾ ಚಟ ತ್ಯಜಿಸುವ ಕುರಿತು ಅವರಿಗೆ ಸ್ವಯಂ ಇಚ್ಛೆ ಇಲ್ಲದಿದ್ದಾಗ ಮಾರುಕಟ್ಟೆಯಲ್ಲಿ ಸಿಗುವ ಪುಡಿಗಳು, ಔಷಧಗಳನ್ನು ಅವರಿಗೆ ತಿಳಿಯದೆ ಆಹಾರದಲ್ಲಿ ಬೆರೆಸಿ ಕೊಡುವುದನ್ನು ಮಾಡಬಾರದು. ಇದರಿಂದ ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚು. ಕೆಲವರಲ್ಲಿ ಮಾನಸಿಕ ಸಮಸ್ಯೆಗೂ ಕಾರಣವಾಗುತ್ತದೆ.

ಜೀವನಶೈಲಿ ಬದಲಾಗಬೇಕು

| ಡಾ.ವಿ.ನಿತಿನ್

ಧೂಮಪಾನ ಜೀವನಶೈಲಿ ಆಧಾರಿತ ಹವ್ಯಾಸವಾಗಿ ಅಭ್ಯಾಸವಾಗಿ ಕೊನೆಗೆ ವ್ಯಸನಕ್ಕೆ ತಿರುಗುತ್ತದೆ. ಪರಿಣಾಮ ಕ್ಯಾನ್ಸರ್, ಶ್ವಾಸಕೋಶಕ್ಕೆ ಹಾನಿ, ಪಾರ್ಶ್ವವಾಯು, ಹೃದಯ, ನರ ಮಂಡಲಕ್ಕೆ ಹಾನಿ, ಮಲಬದ್ಧತೆ, ಅಲ್ಸರ್ ಸೇರಿ ಹಲವು ಕಾಯಿಲೆಗೆ ಕಾರಣವಾಗುತ್ತದೆ. ದುಶ್ಚಟಗಳನ್ನು ತ್ಯಜಿಸುವಂತೆ ಪ್ರೇರೇಪಿಸಲು ಸರ್ಕಾರ, ಸಂಘ-ಸಂಸ್ಥೆಗಳು ಪ್ರಯತ್ನಿಸುತ್ತಿವೆ. ನಟ, ನಟಿಯರು, ವೈದ್ಯರು, ಉನ್ನತ ಅಧಿಕಾರಿಗಳು, ಮಾದರಿ ವ್ಯಕ್ತಿಗಳು ಮೊದಲು ಧೂಮಪಾನದಿಂದ ದೂರ ಇದ್ದು, ಮಾದರಿ ಆಗಬೇಕು. ನಟ ಪುನಿತ್ ರಾಜ್​ಕುಮಾರ್ ನಿಧನದ ನಂತರದಲ್ಲಿ ಹಲವರು ಭಯದಿಂದ ಜಿಮ್ೆ ಹೋಗುವುದನ್ನು ಬಿಟ್ಟರು. ಜಿಮ್ ಬಿಡುವುದರ ಬದಲು ಯಾಕೆ ಆ ರೀತಿ ಆಗಿದೆ ಎಂಬುದರ ಬಗ್ಗೆ ವೈಜ್ಞಾನಿಕವಾಗಿ ಯೋಚನೆ ಮಾಡಿ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು.

ಸರ್ಕಾರದ ಮೇಲೆ ಒತ್ತಡ ಹೇರಿ: ಪ್ರತಿ ವ್ಯಸನಿಯೂ ಧೂಮಪಾನ ತ್ಯಜಿಸಿದರೆ ಸಿಗರೇಟ್ ಇತ್ಯಾದಿ ತಾನೇತಾನಾಗಿ ನಿಷೇಧವಾಗುತ್ತವೆ. ಗ್ರಾಹಕ ಎಲ್ಲಿವರೆಗೆ ಇರುತ್ತಾನೋ ಅಲ್ಲಿಯವರೆಗೆ ಉತ್ಪಾದಕನೂ ಇರುತ್ತಾನೆ. ದುಶ್ಚಟದಿಂದ ದೂರ ಇದ್ದರೆ ಸರ್ಕಾರ ಜನರ ಮೇಲೆ ಒತ್ತಡ ಹೇರಲ್ಲ. ಬದಲಿಗೆ ಜನರೇ ಸರ್ಕಾರದ ಮೇಲೆ ಒತ್ತಡ ಹೇರಿದಂತಾಗಲಿದೆ. ಸರ್ಕಾರ ಆದಾಯದ ಮೂಲವನ್ನು ಬೇರೆಡೆ ಕಂಡುಕೊಳ್ಳಬಹುದು.

ಚಟಕ್ಕೆ ಕಾರಣ ಅನೇಕ: ಧೂಮಪಾನವನ್ನು ಮೊದಲು ಬೇರೆಯವರನ್ನು ನೋಡಿ ಕಲಿಯುವುದೇ ಹೆಚ್ಚು. ಮನಸ್ಸಿಗೆ ಉಲ್ಲಾಸ ಸಿಗುತ್ತದೆ, ಒತ್ತಡ ಕಡಿಮೆ ಮಾಡುತ್ತದೆ ಎಂದೋ ಅಥವಾ ಬೇರೆಯವರನ್ನು ಮೆಚ್ಚಿಸಲೆಂದೋ ಸ್ಮೋಕಿಂಗ್ ಶುರು ಮಾಡಿ ಆನಂತರ ವ್ಯಸನಿಗಳಾಗುತ್ತಾರೆ. ಇದರಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಇತ್ತೀಚಿನ ಸರ್ವೆ ಪ್ರಕಾರ ರಾಜ್ಯದಲ್ಲಿ ಶೇ.63.68 ಧೂಮಪಾನಿಗಳಿದ್ದಾರೆ. ಅದರಲ್ಲಿಯೂ ಬೆಂಗಳೂರಿನಲ್ಲಿ ಹೆಚ್ಚು. ಈ ಚಟದಿಂದ ನಿಧಾನವಾಗಿ ಆರೋಗ್ಯ ಕ್ಷಿಣಿಸಿ ಪ್ರಾಣಹಾನಿಯೂ ಆಗಬಹುದು. ವ್ಯಸನಿ ಶೇ.20 ಹೊಗೆ ಸೇವನೆ ಮಾಡಿದರೆ ಪಕ್ಕದಲ್ಲಿ ಇರುವ ವ್ಯಕ್ತಿ ಶೇ.75 ಸೇವಿಸುತ್ತಾರೆ. ಹೊಗೆಸೊಪು್ಪ ವಿಷಕಾರಿ ಆಗಿದ್ದು, ಶೇ.60 ಕ್ಯಾನ್ಸರ್ ಕಾಯಿಲೆಗಳಿಗೆ ಕಾರಣ ಆಗಲಿದೆ. 40 ಲಕ್ಷ ಕ್ಯಾನ್ಸರ್ ರೋಗಿಗಳು ಚಿಕಿತ್ಸೆ ಸಿಗದೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ವಿಶೇಷವಾಗಿ ಮಹಿಳೆಯರು ಧೂಮಪಾನ ಮಾಡಬಾರದು ಎಂದು ನಮ್ಮ ಸಂಸ್ಕೃತಿ ಹೇಳುತ್ತದೆ. ಆದರೆ ಬದಲಾದ ಜೀವನ ಶೈಲಿಯಿಂದಾಗಿ ಶೇ.30 ಮಹಿಳೆಯರು ವ್ಯಸನಿಗಳಾಗಿದ್ದಾರೆ. ಪರಿಣಾಮ ಹೃದಯಾಘಾತ, ಹಠಾತ್ ಸಾವು, ಗರ್ಭ ನಿಲ್ಲದೆ ಇರುವುದು, ಮಾನಸಿಕ ಒತ್ತಡ, ನರ ದೌರ್ಬಲ್ಯ ಇತ್ಯಾದಿ ತೊಂದರೆಗಳು ಹೆಚ್ಚಿವೆ.

ವರ್ಷಕ್ಕೆ 10 ಸಾವಿರ ರೂ ಉಳಿತಾಯ: ಒಬ್ಬ ವ್ಯಕ್ತಿ ಧೂಮಪಾನ ತೊರೆದರೆ ವರ್ಷಕ್ಕೆ 10 ಸಾವಿರ ರೂ. ಉಳಿತಾಯ ಆಗಲಿದೆ. ದೇಶಕ್ಕೆ 30 ಸಾವಿರ ಕೋಟಿ ರೂ. ಉಳಿತಾಯವಾಗಲಿದೆ ಎಂದು ಅಧ್ಯಯನವೊಂದು ಹೇಳುತ್ತದೆ. 30 ಪ್ಯಾಕ್ ಸಿಗರೇಟ್ ಉಳಿದರೆ ಒಂದು ಮರ ರಕ್ಷಣೆ ಮಾಡಿದಂತೆ.

ಪಂಚಕರ್ಮ ವೈಜ್ಞಾನಿಕ ಪದ್ಧತಿ: ಪಂಚಕರ್ಮ ಎಂಬುದು ಮಸಾಜ್ ಎಂಬುದು ತಪ್ಪು ಕಲ್ಪನೆ. ಆಯುರ್ವೇದ, ಋತುವಿಗೆ ಅನುಗುಣವಾಗಿ ಜೀವನಶೈಲಿ, ಕಾಯಿಲೆಗೆ ಔಷಧ ಮತ್ತು ಜೀವನಶೈಲಿ ಬದಲಾಯಿಸುವ ಮೂಲಕ ಚಿಕಿತ್ಸೆ ಈ ಪದ್ಧತಿಯಲ್ಲಿ ನೀಡಲಾಗುತ್ತದೆ.

ಒಂದೇ ದಿನದಲ್ಲಿ ಅಸಾಧ್ಯ: ಒಂದು ದಿನಕ್ಕೆ ಧೂಮಪಾನವನ್ನು ಯಾರೂ ಕಲಿಯುವುದಿಲ್ಲ. ಅದೇ ರೀತಿ ಒಂದೇ ದಿನವೇ ವ್ಯಸನ ಬಿಡಲು ಅಸಾಧ್ಯ. ಬಿಡುವುದಿದ್ದರೆ ಇಂದೇ ಬಿಡಿ. ಸೇವನೆ ಮುಂದೂಡಿ. ಯೋಗಾಸನ, ಪ್ರಾಣಾಯಾಮದಿಂದ ಸಕಾರಾತ್ಮಕತೆ ಹೆಚ್ಚುತ್ತದೆ.

ಸ್ಟಾರ್ಟ್ ಉಪಾಯ

  • S- Set a Date (ದಿನಾಂಕ ನಿಗದಿ ಮಾಡಿ ದೃಢ ನಿರ್ಧಾರ ಮಾಡಿ)
  • T- Tell Family, Friends, about Date (ಕುಟುಂಬ ಸದಸ್ಯರಿಗೆ, ಸ್ನೇಹಿತರಿಗೆ ತಿಳಿಸಿ)
  • A- Anticipate and Plan for Challenges (ಹವ್ಯಾಸ ತ್ಯಜಿಸಲು ಸವಾಲಿಗೆ ಸಿದ್ಧರಾಗಿ)
  • R- Remove Tobacco products from their places (ಕಾರು, ಮನೆ, ಕೆಲಸದ ಸ್ಥಳದಿಂದ ತಂಬಾಕು ಉತ್ಪನ್ನವನ್ನು ತೆಗೆಯಿರಿ)
  • T- Talk to Doctor and ask for Help (ವೈದ್ಯರ ಸಲಹೆ ಪಡೆಯಿರಿ)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net