ಅಡುಗೆ ತಯಾರಿಸುವಾಗ ಗ್ಯಾಸ್ ಸುರಕ್ಷತಾ ಕ್ರಮ ಅನುಸರಿಸಿ

30 SARAG 5
ಸರಗೂರಿನ ನಾಮಧಾರಿಗೌಡ ಸಮುದಾಯ ಭವನದಲ್ಲಿ ಶನಿವಾರ ಸೌಜನ್ಯ ಗ್ಯಾಸ್ ಸರ್ವೀಸ್‌ನಿಂದ ಆಯೋಜಿಸಿದ್ದ ಗ್ರಾಹಕರಿಗೆ ಗ್ಯಾಸ್ ಬಳಕೆಯ ಮುಂಜಾಗ್ರತೆ ಅರಿವು ಕಾರ್ಯಕ್ರಮದ ಪ್ರಯುಕ್ತ ಗೃಹಿಣಿಯರಿಗೆ ಅಡುಗೆ ಸ್ಪರ್ಧೆ ಏರ್ಪಡಿಸಲಾಗಿತ್ತು.
Published on

ಸರಗೂರು: ಮಹಿಳೆಯರು ಮುಂಜಾಗ್ರತಾ ಕ್ರಮವಾಗಿ ಗ್ಯಾಸ್ ಸುರಕ್ಷತಾ ಕ್ರಮ ಅನುಸರಿಸಿಕೊಂಡು ಅಡುಗೆ ಮಾಡಬೇಕು ಎಂದು ಸೌಜನ್ಯ ಗ್ಯಾಸ್ ಏಜೆನ್ಸಿ ಮಾಲೀಕರೂ ಆದ ಮಾಜಿ ಸಚಿವ ಎಂ.ಶಿವಣ್ಣ ಸಲಹೆ ನೀಡಿದರು.

ಪಟ್ಟಣದ ಸೌಜನ್ಯ ಗ್ಯಾಸ್ ಸರ್ವೀಸ್‌ನಿಂದ ಭಾರತ್ ಗ್ಯಾಸ್ ಏಜೆನ್ಸಿ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಶನಿವಾರ ಆಯೋಜಿಸಿದ್ದ ಗ್ಯಾಸ್ ಬಳಕೆಯ ಮುಂಜಾಗ್ರತಾ ಕ್ರಮ, ಗೃಹಿಣಿಯರಿಗೆ ಅಡುಗೆ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮನೆಗಳಲ್ಲಿ ಅಡುಗೆ ಕೋಣೆ ಸ್ವಚ್ಛವಾಗಿಟ್ಟುಕೊಂಡು ಗಾಳಿ, ಬೆಳಕು ಇರಬೇಕು. ಸಿಲಿಂಡರ್, ರೆಗ್ಯುಲೇಟರ್, ಗ್ಯಾಸ್ ಸ್ಟೌಗಳಲ್ಲಿ ಲೋಪವಾದರೆ ಶೀಘ್ರದಲ್ಲೇ ಕ್ರಮವಹಿಸಬೇಕು. ಇದಕ್ಕಾಗಿ ಗ್ಯಾಸ್ ವಿತರಕರನ್ನು ಸಂಪರ್ಕಿಸಬೇಕು. ಕೂಡಲೇ ಸರಿಪಡಿಸಲಿದ್ದಾರೆ. ಗ್ರಾಹಕರ ಹಿತ ಕಾಪಾಡುವುದು ನಮ್ಮ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಗ್ರಾಹಕರು ಮುಂದಾಗಬೇಕು ಎಂದು ತಿಳಿಸಿದರು.

ಗ್ರಾಮಾಂತರ ಭಾಗದ ಜನರಿಗೆ ಗ್ಯಾಸ್ ಸೇವೆ ನೀಡುವ ಸಲುವಾಗಿ 25 ವರ್ಷಗಳ ಹಿಂದೆ ಆರಂಭವಾದ ಸೌಜನ್ಯ ಗ್ಯಾಸ್ ಸರ್ವೀಸ್ ಉತ್ತಮ ಸೇವೆ ನೀಡುತ್ತಾ ಬಂದಿದೆ. ಸದ್ಯ 15 ಸಾವಿರ ಗ್ರಾಹಕರನ್ನು ಹೊಂದಿದ್ದು, ಸೇವೆಯಲ್ಲಿ ಹೆಸರು ಮಾಡಿದೆ. ಕನೆಕ್ಷನ್‌ನಲ್ಲಿ ಶೇ.100 ರಷ್ಟು ತಲುಪಿದೆ. ಮುಂದಿನ ದಿನಗಳಲ್ಲಿಯೂ ಉತ್ತಮ ಸೇವೆ ನೀಡಲು ಸಜ್ಜಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಗೃಹಿಣಿಯರಿಗೆ ಅಡುಗೆ ಸ್ಪರ್ಧೆ ಆಯೋಜಿಸಿದ್ದು, ವಿಜೇತರಾದವರಿಗೆ ಭಾರತ್ ಪೆಟ್ರೋಲಿಯಂನ ಸೇಲ್ಸ್ ಮ್ಯಾನೇಜರ್ ಬಿಸೋಜ ಸೈವನ್ ಬಹುಮಾನ ವಿತರಿಸಿದರು. ನಿತ್ಯಾ ಪ್ರಥಮ (5000 ರೂ. ನಗದು ಬಹುಮಾನ), ನಾಗೇಶ್ವರಿ ದ್ವಿತೀಯ (3000 ರೂ.), ಭವ್ಯಾ ತೃತೀಯ(2000 ರೂ.) ಸ್ಥಾನ ಪಡೆದರೆ ಇನ್ನುಳಿದವರಿಗೆ ಸಮಾಧಾನಕಾರ ಬಹುಮಾನ ವಿತರಿಸಲಾಯಿತು. ಗ್ಯಾಸ್ ಸಿಬ್ಬಂದಿಯೊಬ್ಬರು ಮಹಿಳೆಯರು ಗ್ಯಾಸ್ ಸುರಕ್ಷತಾ ಕ್ರಮವನ್ನು ಹೇಗೆ ಅನುಸರಿಸಬೇಕು. ಮುಂಜಾಗ್ರತಾ ಕ್ರಮಗಳೇನು? ಎಂಬುದರ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ಅರಿವು ಮೂಡಿಸಿದರು.

ತೀರ್ಪುಗಾರರಾದ ಬಸವರಾಜಪ್ಪ, ಚಿಕ್ಕಳ್ಳಿ ಪುಟ್ಟಣ್ಣ, ಒಡೆಯರ್ ಪಾಳ್ಯದ ನಂಜಪ್ಪ ಅವರನ್ನು ಸನ್ಮಾನಿಸಲಾಯಿತು. ಸೌಜನ್ಯ ಗ್ಯಾಸ್ ಏಜೆನ್ಸಿ ಸಹ ಮಾಲೀಕರಾದ ಹರ್ಷವರ್ಧನ್, ಸೇಲ್ಸ್ ಮ್ಯಾನೇಜರ್ ಸೌಜನ್ಯ ಶಿವಣ್ಣ, ದೇವಿಕಾ ಶಿವಣ್ಣ, ಶಬ್ದವೇದಿ ಚಂದ್ರಶೇಖರ್, ಬಿ.ವಿ.ಬಸವರಾಜು, ಬಿ.ಪಿ.ಬೋರೇಗೌಡ, ಬಿ.ಸಿ.ಬಸಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ, ಕಸಾಪ ಅಧ್ಯಕ್ಷ ಕೆಂಡಗಣ್ಣಸ್ವಾಮಿ, ತೋಗಟವೀರ ಸಮಾಜದ ಅಧ್ಯಕ್ಷ ರವೀಂದ್ರ, ರವಿ, ಸಿಬ್ಬಂದಿ ಪ್ರಸಾದ್, ಸೋಮಶೇಖರ್, ಮಹಿಳೆ ಗ್ರಾಹಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net