ಜನಪದ ಸಂಸ್ಕೃತಿ ಎಲ್ಲ ಸಾಹಿತ್ಯಕ್ಕೂ ಪ್ರೇರಣೆ

14sri-2
ಶೃಂಗೇರಿಯಲ್ಲಿ ಆಯೋಜಿಸಿದ್ದ ಥಿಂಕಿಂಗ್ ಹನಿಗವನ ಸಂಕಲನ ಪುಸ್ತಕವನ್ನು ಸಾಹಿತಿ ಚಟ್ನಳ್ಳಿ ಬಿಡುಗಡೆಗೊಳಿಸಿದರು. ಡಾ.ಎಂ.ಸ್ವಾಮಿ, ಶೈಲಜಾ ರತ್ನಾಕರ ಹೆಗಡೆ, ಸತ್ಯನಾರಾಯಣ್,ಸುಜನ್ ಇದ್ದರು.
Published on

ಶೃಂಗೇರಿ: ಬದುಕಿನ ಅನುಭವತೆಯ ಸಾರವನ್ನು ಸೂಕ್ಷ್ಮವಾಗಿ ಅವಲೋಕಿಸಿ ಅದಕ್ಕೆ ಮೂರ್ತರೂಪ ನೀಡುವನು ಕವಿಯಾಗಿ, ಸಾಹಿತಿಯಾಗಿ ಸಮಾಜದಲ್ಲಿ ಗೌರವದಿಂದ ಬದುಕುತ್ತಾನೆ ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದರು.
ಸೋಮವಾರ ಶಾರದಾಂಬಾ ಪಬ್ಲಿಕೇಷನ್, ತಾಲೂಕು ಕಸಾಪ, ಜೆಸಿಬಿಎಂ ಕಾಲೇಜು ಹಾಗೂ ಜೆಸಿಐ ಸಹಯೋಗದಲ್ಲಿ ಬಿ.ಶಿವಶಂಕರ್ ಅವರ ಥಿಂಕಿಂಗ್ ಹನಿಗವನ ಸಂಕಲನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಮಕ್ಕಳ ನಿಜವಾದ ಸಾಮರ್ಥ್ಯ ಹೊರಗೆಳೆಯುವ ಶಕ್ತಿ ಶಿಕ್ಷಣಕ್ಕಿದೆ. ಆದರೆ ಇನ್ನಷ್ಟು ಆಳಕ್ಕೆ ಇಳಿದು ಚಿಂತನೆ ಬೆಳೆಸಿಕೊಂಡಾಗ ಸಾಹಿತ್ಯದ ಬೆಳವಣಿಗೆ ಸಾಧ್ಯವಾಗುತ್ತದೆ. ಜನಪದ ಸಂಸ್ಕೃತಿ ಎಲ್ಲ ಸಾಹಿತ್ಯ ಪ್ರಕಾರಗಳಿಗೆ ಮುಖ್ಯ ಪ್ರೇರಣೆ. ಬದುಕಿನಲ್ಲಿ ತಾತ್ವಿಕತೆ ನೆಲೆಗಟ್ಟು ಮರೆಯಾಗಿ ತಂತ್ರಗಾರಿಕೆ ತುಂಬಿಕೊಂಡಿದೆ ಎಂದರು.
ಸಂಸ್ಕೃತಿ, ಸಂಸ್ಕಾರ ಬೆಳೆಯಬೇಕಾರೆ ಸಾಹಿತ್ಯ ಸೊಗಡನ್ನು ಅಸ್ವಾದಿಸಿ ಓದುವ ಮನಸ್ಸುಗಳು ಅಗತ್ಯ. ಕೇವಲ ನಾಲ್ಕು ಸಾಲುಗಳಲ್ಲಿ ಸಮಾಜದ ತಪ್ಪು-ಒಪ್ಪುಗಳನ್ನು ತಿದ್ದುವ ತಾಕತ್ತು ಹನಿಗವನಕ್ಕೆ ಇದೆ. ಮಾನವನು ತನ್ನ ಬದುಕನ್ನು ರೂಪಿಸಿಕೊಳ್ಳಲು ಸಾಹಿತ್ಯ ಕ್ಷೇತ್ರ ಪೂರಕ. ಸಾಹಿತ್ಯ ಚೈತನ್ಯ ಶಕ್ತಿ. ನಮ್ಮ ಅಂತರಂಗದ ಅನುಭವತೆಯನ್ನು ಸೇರಿಸಿ ಅದರ ಜತೆಗೆ ನಾವು ಶ್ರಮಿಸಿದಾಗ ಸಾಹಿತ್ಯ, ಕಾವ್ಯದ ಹುಟ್ಟು ಸಾಧ್ಯ ಎಂದರು.
ಪ್ರಾಚಾರ್ಯ ಡಾ.ಎಂ.ಸ್ವಾಮಿ, ತಾಲೂಕು ಕಸಾಪ ಮಾಜಿ ಅಧ್ಯಕ್ಷೆ ಶೈಲಜಾ ರತ್ನಾಕರ್ ಹೆಗಡೆ, ಚಿತ್ರಕಲಾವಿದ ಸತ್ಯಾನಾರಾಯಣ್, ಸಾಹಿತಿ ಬಿ.ಶಿವಶಂಕರ್,ಜೆಸಿಐ ಅಧ್ಯಕ್ಷ ಸುಜನ್, ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net