

ಶಿವಮೊಗ್ಗ: ಜನಪದ ಕಲೆಗಳ ತರಬೇತಿ ನೀಡುವುದು ಉತ್ತಮ ಕಾರ್ಯ. ಜನಪದ ಕಲೆ, ಸಾಹಿತ್ಯಕ್ಕೆ ಇಂದು ಪ್ರೋತ್ಸಾಹದ ಅಗತ್ಯವಿದೆ ಎಂದು ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಜಾನಪದ ಪರಿಷತ್ ಜಿಲ್ಲಾ ಸಮಿತಿಯಿಂದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಮೂರು ದಿನಗಳ ಜನಪದ ಕಲೆಗಳ ಕಲಿಕಾ ಶಿಬಿರದ ಸಮಾರೋಪ ಮತ್ತು ಬೆಕ್ಕಿನ ಕಲ್ಮಠದ ಶ್ರಾವಣ ಚಿಂತನ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಯುವಜನರ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ನಮ್ಮತನವನ್ನು ನಾವಿಂದು ಕಳೆದುಕೊಳ್ಳುತ್ತಿದ್ದೇವೆ. ಆಸಕ್ತಿ, ಕುತೂಹಲ, ಸಾಧನೆಯಿಲ್ಲದ ಬದುಕು ನಮ್ಮನ್ನು ಯಂತ್ರವನ್ನಾಗಿಸಿದೆ. ಮಕ್ಕಳಿಗೆ ಸಂಸ್ಕಾರ ಕಲಿಸಬೇಕಾದ ಹಿರಿಯರು ತಮ್ಮ ಹೊಣೆಯನ್ನು ಬೇರೆಯವರ ಮೇಲೆ ಹಾಕುತ್ತಿದ್ದಾರೆ ಎಂದು ಹೇಳಿದರು.
ಜನಪದ ಬೇರು-ಕವಿವಾಣಿ ಹೂವು ಎನ್ನುವ ಮಾತಿದೆ. ಜನಪದರ ಬದುಕುವ ರೀತಿ, ಅವರ ನೀತಿ ಆದರ್ಶಮಯ. ಅವರಿಗೆ ಕಲಿಕೆಯೇ ಮುಖ್ಯ ಗುರಿಯಾಗಿತ್ತು. ಜೀವನವೇ ಪಾಠವಾಗಿತ್ತು ಎಂದರು.
ಚಾಲುಕ್ಯ ನಗರದ ಕುವೆಂಪು ಕ್ಷೇಮಾಭಿವೃದ್ಧಿ ಸೇವಾ ಸಂಘದ ಗೌರವಾಧ್ಯಕ್ಷ, ಹೃದ್ರೋಗ ತಜ್ಞ ಡಾ. ಆರ್.ಬಾಲಸುಬ್ರಹ್ಮಣ್ಯ ಮಾತನಾಡಿ, ಜನಪದ ಮನುಷ್ಯರ ನಡುವೆ ಸಂಬಂಧ ಬೆಸೆದು, ಜೀವನ ಮೌಲ್ಯಗಳನ್ನು ನೀಡುವ ಶಕ್ತಿ ಪಡೆದಿದೆ ಎಂದು ಅಭಿಪ್ರಾಯಪಟ್ಟರು.
ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ, ಕಸಾಪ ಶಿವಮೊಗ್ಗ ತಾಲೂಕು ಅಧ್ಯಕ್ಷೆ ಮಹಾದೇವಿ, ಪ್ರಮುಖರಾದ ಕೃಷ್ಣಮೂರ್ತಿ ಹಿಳ್ಳೋಡಿ, ಡಾ. ಕೆ.ಜಿ.ವೆಂಕಟೇಶ್, ಧರ್ಮೋಜಿರಾವ್ ಮುಂತಾದವರಿದ್ದರು. ವಿದ್ಯಾರ್ಥಿಗಳಿಗೆ ಜನಪದ ಕಲೆಗಳ ತರಬೇತಿ ನೀಡಿದ ಗಣಪು ಬಡವಗೌಡ ಕರ್ಕಿ, ಎಂ.ಜಿ.ಮಂಜೇಗೌಡ ಚನ್ನರಾಯಪಟ್ಟಣ, ಗಾಯಕರಾದ ನಳಿನಾಕ್ಷಿ, ಸುಶೀಲಾ ಷಣ್ಮುಗಂ, ಸುರೇಶ್ ಗೌಡ, ಡಾ. ಜಿ.ಆರ್.ಲವ, ಚಾಲುಕ್ಯನಗರದ ನಾರಾಯಣ, ರಾಮಪ್ಪಗೌಡ ಅವರನ್ನು ಸನ್ಮಾನಿಸಲಾಯಿತು.