

ಕೋಲಾರ: ಪ್ರತಿ ಲೀಟರ್ ಹಾಲಿನ ದರ 2 ರೂ. ಕಡಿತಗೊಳಿಸಿರುವ ಆದೇಶವನ್ನು ಕೋಚಿಮುಲ್ ಆಡಳಿತ ಮಂಡಳಿ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಜಮಾಯಿಸಿದ ಸಂಘದ ಕಾರ್ಯಕರ್ತರು ಹಾಲಿನ ಕ್ಯಾನ್, ಮೇವು, ಹಸುಗಳ ಸಮೇತ ಮೆರವಣಿಗೆ ನಡೆಸಿ, ರಸ್ತೆ ತಡೆದು ಪ್ರತಿಭಟಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಕೋಲಾರ, ಚಿಕ್ಕಬಳ್ಳಾಪುರ ರೈತ ಜೀವನಾಡಿ ಹೈನೋದ್ಯಮ, ಲಕ್ಷಾಂತರ ಕುಟುಂಬಗಳು ಹಾಲು ಉತ್ಪಾದನೆಯಿಂದ ಜೀವನ ನಡೆಸುತ್ತಿವೆ. ಇಷ್ಟು ದಿನ ಬರಗಾಲದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ರೈತರ ಸುಧಾರಣೆಗೆ ಒತ್ತು ನೀಡುವುದು ಬಿಟ್ಟು, ಹಾಲಿನ ದರ ಕಡಿತಗೊಳಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಇತ್ತೀಚಿನ ದಿನಗಳಲ್ಲಿ ಹೈನೋದ್ಯಮ ದುಬಾರಿಯಾಗಿದೆ. ಹಸುಗಳ ಸಾಕಣೆ ಸುಲಭವಲ್ಲ, ಪೌಷ್ಟಿಕ ಆಹಾರ, ಬೂಸ, ಚಕ್ಕೆ ಬೆಲೆ ಗಗನಕ್ಕೇರಿದೆ. ಇದರ ಬೆಲೆ ನಿಯಂತ್ರಣವು ಯಾವ ಇಲಾಖೆಗೂ ಬರುವುದಿಲ್ಲ. ಇನ್ನು ಒಕ್ಕೂಟದಿಂದಲೇ ಕಲ್ಪಿಸಲಾಗುತ್ತಿರುವ ಪೌಷ್ಟಿಕ ಆಹಾರದ ದರವೂ ಕಡಿಮೆಯಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದರ ಕಡಿತಗೊಳಿಸುವ ಅವಶ್ಯ ಏನಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ಲೀಟರ್ ಹಾಲು ಉತ್ಪಾದಿಸಲು 40 ರೂ. ವೆಚ್ಚವಾಗುತ್ತದೆ. ಒಕ್ಕೂಟ ನೀಡುವ ೩೩ .೪೦ ಪೈಸೆ ಯಾವುದಕ್ಕೂ ಸಾಕಾಗುವುದಿಲ್ಲ. ರೈತರಿಗೆ ಉಳಿಯುವುದು ಕೊನೆಗೆ ಸಗಣಿ ಗಂಜಲ ಮಾತ್ರ. ಅಭಿವೃದ್ಧಿ ಹೆಸರಿಲ್ಲಿ ಹಾಲಿನ ದರ ಕಡಿಮೆ ಮಾಡಿ ರೈತ ವಿರೋಽ ಧೋರಣೆ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದರು.
ಸಂಘದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ತೀವ್ರ ಬರಪರಿಸ್ಥಿತಿ ಎದುರಾದಾಗ ಹಾಲಿನ ಉತ್ಪಾದನೆ ಕಡಿಮೆಯಾಗಿತ್ತು, ಆಗ ದರ ಏರಿಕೆ ಮಾಡಲಿಲ್ಲ, ಈಗ ಉತ್ಪಾದನೆ ಜಾಸ್ತಿಯಾದ ನೆಪವೊಡ್ಡಿ ಕಡಿತಗೊಳಿಸಲಾಗಿದೆ. ರೈತ ಸಂಕಷ್ಟದಲ್ಲಿದ್ದಾಗ ಯಾರೂ ನೆರವಿಗೆ ಧಾವಿಸಲಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.
ಪ್ರತಿಭಟನೆಯ ನಂತರ ಒಕ್ಕೂಟದ ಉಪ ವ್ಯವಸ್ಥಾಪಕ ಶ್ರೀನಿವಾಸ್‌ಗೌಡಗೆ ಮನವಿ ಸಲ್ಲಿಸಲಾಯಿತು.
ಸಂಘದ ಪದಾಧಿಕಾರಿಗಳಾದ ಮರಗಲ್ ಶ್ರೀನಿವಾಸ್, ವಕ್ಕಲೇರಿ ಹನುಮಯ್ಯ, ಶಿವಾರೆಡ್ಡಿ, ಸುಪ್ರೀಂ ಚಲ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಚಂದ್ರಪ್ಪ, ನಾರಾಯಣಗೌಡ, ಗೀರೀಶ್, ಅಶೋಕ್, ಶೈಲಜ, ನಾಗರತ್ನ, ಸುಗುಣ, ಶೋಭಾ, ಚೌಡಮ್ಮ, ಲಕ್ಷಮ್ಮ, ಅನಿಲ್ ಇದ್ದರು.