ಸಂಪಾದಕೀಯ: ಸಮಸ್ಯೆಗಳತ್ತ ಗಮನಹರಿಸಿ

ಚ
Published on

ದೇಶಾದ್ಯಂತ ಇನ್ನೂ 4 ಹಂತಗಳ ಮತದಾನ ಬಾಕಿ ಇದ್ದರೂ ನಮ್ಮ ರಾಜ್ಯದ ಮಟ್ಟಿಗೆ ಮಂಗಳವಾರದ ಮತದಾನದೊಂದಿಗೆ ಲೋಕಸಭಾ ಚುನಾವಣೆ ಮುಗಿದಂತಾಗಿದೆ. ಫಲಿತಾಂಶಕ್ಕೆ ಇನ್ನೂ ಸುಮಾರು 1 ತಿಂಗಳು ಬಾಕಿ ಇದೆ. ಲೋಕಸಭಾ ಚುನಾವಣೆ ಘೊಷಣೆಯಾದಾಗಿನಿಂದಲೂ, ಅಂದರೆ ಕಳೆದ ಸುಮಾರು ಒಂದೂವರೆ ತಿಂಗಳುಗಳಿಂದ ರಾಜ್ಯದಲ್ಲಿ ಚುನಾಯಿತ ಸರ್ಕಾರವೇ ಇಲ್ಲವೇನೋ ಎಂದು ಸಂಶಯ ಬರುವಂತಹ ಪರಿಸ್ಥಿತಿ ಇದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಹಿರಿಯ-ಕಿರಿಯ ಅಧಿಕಾರಿಗಳಾದಿಯಾಗಿ ಎಲ್ಲರೂ ರಾಜಕೀಯ ರ್ಯಾಲಿಗಳಲ್ಲಿ ಮತ್ತು ಚುನಾವಣೆ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಪರಿಣಾಮವಾಗಿ ಜನರ ಕುಂದುಕೊರತೆಗಳನ್ನು ಕೇಳುವವರೇ ಇಲ್ಲದಂತಾಗಿದೆ. ಮೊದಲೇ ಬರಗಾಲದಿಂದ ತತ್ತರಿಸಿರುವ ರೈತ ಸಮುದಾಯ, ತಿಂಗಳುಗಟ್ಟಲೇ ಅಲ್ಪಸ್ವಲ್ಪ ಮಳೆಯೂ ಇಲ್ಲದೆ ಪರಿತಪಿಸುತ್ತಿದೆ.

ಇಡೀ ರಾಜ್ಯ ಬಿರುಬಿಸಿಲಿನ ಬೇಗೆಯಲ್ಲಿ ಬಸವಳಿದಿದ್ದು ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಮೇವು ಬೆಳೆಯುವುದಿರಲಿ, ಹುಲ್ಲು ಕೂಡ ಬೆಳೆಯುತ್ತಿಲ್ಲ. ಸಕಾಲಕ್ಕೆ ನೀರು-ಮೇವು ಪೂರೈಸಲಾಗದೇ ಜಾನುವಾರುಗಳನ್ನು ಕಸಾಯಿಖಾನೆಗಳಿಗೆ ಮಾರುವ ಅನಿವಾರ್ಯತೆಯನ್ನು ಅನೇಕ ರೈತರು ಎದುರಿಸುತ್ತಿದ್ದಾರೆ. ಅವುಗಳಿಗಾಗಿ ಗೋಶಾಲೆಗಳನ್ನು ತೆರೆಯುವ ತುರ್ತು ಅವಶ್ಯಕತೆ ಹಲವು ಪ್ರದೇಶಗಳಲ್ಲಿ ಇದೆ. ಬಹುತೇಕ ಕೊಳವೆಬಾವಿಗಳು ಬತ್ತಿಹೋಗಿವೆ. ಅಲ್ಲೊಂದು ಇಲ್ಲೊಂದು ಕೊಳವೆಬಾವಿ ಸುಸ್ಥಿತಿಯಲ್ಲಿದ್ದರೂ ವಿದ್ಯುತ್ ಕೊರತೆಯಿಂದಾಗಿ ನೀರೆತ್ತಲು ಸಾಧ್ಯವಾಗದ ಸನ್ನಿವೇಶ ತಲೆದೋರಿದೆ. ನಗರಪ್ರದೇಶಗಳಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ತೀವ್ರ ಬಿಸಿಗಾಳಿಯಿಂದಾಗಿ ಜನರ ಬದುಕು ನರಕವಾಗಿದೆ. ಬಹುತೇಕ ನಗರ-ಪಟ್ಟಣಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಅಂತರ್ಜಲ ಮಟ್ಟ ಕುಸಿದು ಬೋರ್​ವೆಲ್​ಗಳಲ್ಲಿ ನೀರು ಬರದಂತಾಗಿದೆ.

ಇದೇ ಅವಕಾಶ ಎಂದುಕೊಂಡು ಟ್ಯಾಂಕರ್ ಮಾಫಿಯಾ ಸಾರ್ವಜನಿಕರ ಸುಲಿಗೆ ಮಾಡುತ್ತಿದೆ. ಜನರ ಅನಿವಾರ್ಯತೆಯನ್ನೇ ಬಂಡವಾಳ ಮಾಡಿಕೊಂಡು 2-3 ಪಟ್ಟು ಹೆಚ್ಚು ಹಣ ವಸೂಲಿ ಮಾಡುತ್ತಿದೆ. ನೀರಿನ ಕೊರತೆಯಿಂದಾಗಿ ಕಟ್ಟಡ ನಿರ್ಮಾಣ ಕಾಮಗಾರಿಗಳೂ ಹಲವು ಕಡೆ ಅರ್ಧಕ್ಕೆ ನಿಂತಿವೆ. ಮುಂಗಾರು ಪ್ರವೇಶಿಸಲು ಇನ್ನು ಒಂದೇ ತಿಂಗಳು ಬಾಕಿ ಇದೆ. ಪ್ರತಿ ಬಾರಿ ಮಳೆಗಾಲ ಬಂದಾಗಲೂ ನಗರ-ಪಟ್ಟಣಗಳ ಅನೇಕ ಸ್ಥಳಗಳು ಪ್ರವಾಹ ಪರಿಸ್ಥಿತಿ ಅನುಭವಿಸುತ್ತವೆ. ಮಳೆ ನೀರು ಸರಾಗವಾಗಿ ಹಾದುಹೋಗಲು ಜಾಗವೇ ಇರುವುದಿಲ್ಲ. ಅದೇ ರೀತಿ, ಈ ಬಾರಿಯೂ ನೂರಾರು ಕಡೆ ಮಳೆ ನೀರು ನಿಂತು ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಬೇಸಿಗೆಯಲ್ಲಿಯೇ ಮೋರಿಗಳ ಹೂಳು ತೆಗೆದರೆ ರಸ್ತೆಗಳು ಪ್ರವಾಹ ಸ್ಥಿತಿ ಅನುಭವಿಸುವುದು ತಪ್ಪುತ್ತದೆ. ಇದು ಗೊತ್ತಿದ್ದರೂ, ಈವರೆಗೆ ಯಾವುದೇ ಅಧಿಕಾರಿಯಾಗಲಿ ರಾಜಕಾರಣಿಯಾಗಲಿ ಆ ಕೆಲಸವನ್ನು ಪ್ರಾರಂಭಿಸುವ ಗೋಜಿಗೆ ಹೋಗಿಲ್ಲ. ಈಗಲಾದರೂ ರಾಜ್ಯ ಸರ್ಕಾರ ತುರ್ತು ಸಾರ್ವಜನಿಕ ಕಾರ್ಯಗಳತ್ತ ಗಮನ ಹರಿಸಲಿ. ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ತ್ವರಿತ ಕ್ರಮ ಕೈಗೊಳ್ಳಲಿ. ಮಳೆಗಾಲದಲ್ಲಿ ನಗರ ಪ್ರದೇಶಗಳಲ್ಲಿ ಎದುರಾಗುವ ಪ್ರವಾಹ ಪರಿಸ್ಥಿತಿ ತಪ್ಪಿಸಲು ತಕ್ಷಣದಿಂದಲೇ ಕಾರ್ಯೋನ್ಮುಖವಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net